ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ
Facebook
Twitter
LinkedIn
WhatsApp

-ಅರವಿಂದ ಚೊಕ್ಕಾಡಿ

ಹೇಗೆ ಒಬ್ಬರಿಂದ ಒಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಂಡರೆ ಕಾಯಿಲೆಯನ್ನು ತಡೆಯ ಬಹುದೆಂದು ಗೊತ್ತಿದ್ದರೂ ಅದನ್ನು ಮಾಡದೆ ಅಜ್ಞಾನವನ್ನು ಪ್ರದರ್ಶಿಸಿದ್ದೇವೆಯೋ ಅದೇ ರೀತಿಯಲ್ಲಿ ನಮ್ಮ‌ ಮನೆಯಲ್ಲಿದ್ದ ವಿದ್ಯುತ್ ದೀಪಗಳನ್ನು ನಾವೇ ನಂದಿಸಿ ಕತ್ತಲನ್ನು ಆಹ್ವಾನಿಸಿಕೊಂಡಿದ್ದೇವೆ;ಕೊರೋನಾವನ್ನು ಆಹ್ವಾನಿಸಿಕೊಂಡಂತೆ.

ಆ ಕತ್ತಲೆಯಲ್ಲಿಯೇ ಹಣತೆಯಲ್ಲಿ ದೀಪವನ್ನು ಬೆಳಗಿದ್ದೇವೆ.ಕೊರೋನಾವನ್ನು ತಡೆಯುವ ಶಕ್ತಿ ನಮಗಿದೆ ಎಂದು ನಾವೇ ದೃಢಪಡಿಸಿಕೊಂಡಿದ್ದೇವೆ.ಇದು ಜ್ಞಾನದ ಹಣತೆ.ಮೇಲ್ಮುಖಿಯಾಗಿ ಚಲಿಸುವ ಹಣತೆ ಮಾತ್ರವೇ ಜ್ಞಾನದ ಹಣತೆ.ಈ ಹಣತೆಯನ್ನು ಬೆಳಗಿದ ನಂತರವಾದರೂ ನಮ್ಮ ಮೂರ್ಖತನವು ತೊಲಗಲಿ.

ಆತ್ಮವನ್ನು ನಾವು ಜ್ಯೋತಿ ರೂಪದಲ್ಲಿ ಕಂಡಿದ್ದೇವೆ.ಮೃತ್ಯುವನ್ನು ಅಮರತ್ವದ ಕಡೆಗೆ ಒಯ್ಯುವ ಜ್ಯೋತಿಯು ವಿಶ್ವಾದ್ಯಂತ ಕೊರೋನಾದಲ್ಲಿ ಮೃತರಾದವರ ಆತ್ಮವನ್ನು;ಈ ಸಂದರ್ಭದಲ್ಲಿ ಹಸಿವಿನಿಂದ,ಅಡಚಣೆಯಿಂದ ಮೃತರಾದವರ,ರೋಗಿಗಳ ಸೇವೆಯಲ್ಲೆ ಮೃತರಾದ ಕರ್ಮಯೋಗಿಗಳಾದ ವೈದ್ಯರ,ಭದ್ರತಾ ಸಿಬ್ಬಂದಿಯ ಸಾವೇ ಇಲ್ಲದ ಆತ್ಮಗಳನ್ನು ಅವರವರ ನಂಬಿಕೆಗಳಿಗನುಗುಣವಾಗಿ ಜ್ಯೋತಿಯು ಪರಮ ಪದಕ್ಕೆ ಒಯ್ಯಲಿ.

ಹಣತೆಯಲ್ಲಿ ಬೆಳಗುವ ಜ್ಯೋತಿಯು ಇಂತಹ ಸಂದರ್ಭವನ್ನು ಬಳಸಿಕೊಂಡು ವೈಯಕ್ತಿಕ ಸಿಟ್ಟುಗಳನ್ನು ತೀರಿಸಿಕೊಳ್ಳುವವರಲ್ಲಿ ಸುಜ್ಞಾನವನ್ನು ಬೆಳಗಲಿ.

ಯಾವುದೆ ಪರಿಸ್ಥಿತಿಯನ್ನು ತಾವು ಬೆಳೆಸಿಕೊಂಡ ಪೂರ್ವಾಗ್ರಹ ಪೀಡಿದ ಸಮುದಾಯದ್ವೇಷದ ಬೆಂಕಿಯನ್ನು ಹರಡುವವರಲ್ಲಿ ಯಾರು ಯಾಕೆ ಆ ರೀತಿ ವರ್ತಿಸುತ್ತಾರೆ ಎಂಬುದನ್ನು ಅರಿಯುವ ಜ್ಞಾನದ ಬೆಳಕು ಬೆಳಗಲಿ.

ಹಗಲಿರುಳು ರೋಗಿಗಳನ್ನು ಉಪಚರಿಸುವ ವೈದ್ಯರು,ದಾದಿಯರು,ಊರನ್ನು ಸ್ವಚ್ಛವಾಗಿರಿಸುವ ಪೌರ ಕಾರ್ಮಿಕರು ಮತ್ತು ಆಡಳಿತ ಯಂತ್ರದೊಂದಿಗೆ ನಮ್ಮೆಲ್ಲ ಶಕ್ತಿಯೂ ಜೊತೆಯಲ್ಲಿರುವುದರ ಬದ್ಧತೆಯ ಅರಿವನ್ನು ಜ್ಯೋತಿಯು ಬೆಳಗಲಿ.

ಮುಖ್ಯಮಂತ್ರಿಯವರು ತಮ್ಮ ಇಳಿವಯಸ್ಸಿನಲ್ಲಿ ಅತ್ಯಂತ ಸಮರ್ಪಕವಾಗಿ ರಾಜ್ಯವನ್ನು ರಕ್ಷಿಸುತ್ತಿದ್ದಾರೆ.ಬೆಳಗಿದ ಜ್ಯೋತಿಯು ಮುಖ್ಯಮಂತ್ರಿಯವರ ಅವರ ಸಂಪುಟದ ಮೇಲಿರುವ ನಮ್ಮ ಅಪಾರ ನಂಬಿಕೆಯನ್ನು ದೃಢಪಡಿಸುತ್ತದೆ.ಭಗವಂತನು ಅವರಿಗೆ ಸರ್ವ ಶಕ್ತಿಯನ್ನು ಕೊಡಲಿ.

ಇಡೀ ದೇಶದ ನೂರಾಮೂವತ್ತು ಕೋಟಿ ಜನರ ಶಕ್ತಿಯನ್ನು ಪ್ರತಿನಿಧಿಸುವ ಪ್ರಧಾನ ಮಂತ್ರಿಯವರ ಮೇಲೆ ಜನತೆಯ ಅಪಾರ ನಂಬಿಕೆಯ ಹೊಣೆ ಇದೆ.ಆ ಹೊಣೆಯನ್ನು ನಿಭಾಯಿಸುವ ಶಕ್ತಿಯನ್ನು ಅವರಿಗೂ ಅವರ ಸಂಪುಟಕ್ಕೂ ಭಗವಂತನು ಕೊಡಲಿ.

ಮನುಷ್ಯನ ದೌರ್ಜನ್ಯಕ್ಕೆ ಮುನಿದು ಭೂತಾಯಿಯೇ ಸಿಟ್ಟಿಗೆದ್ದಿದ್ದಾಳೆ.ಪೃಥ್ವಿಯನ್ನು ಬಳಸುವ ಅಧಿಕಾರವಷ್ಟೆ ನಮಗಿದೆ ಹೊರತು ಭೂತಾಯಿಯ ಯಾವುದೆ ಸಂತಾನವನ್ನು ನಾಶಪಡಿಸುವ ಅಧಿಕಾರ ನಮಗಿಲ್ಲ ಎಂಬ ಎಚ್ಚರವನ್ನು,ಮೃಗ,ಪಕ್ಷಿ,ಸಸ್ಯ,ನೀರು,ಗಾಳಿಗಳನ್ನು ಸಹೋದರರೆಂದು ಭಾವಿಸುವ ಅರಿವನ್ನು ಜ್ಞಾನ ಜ್ಯೋತಿಯು ನಮ್ಮಲ್ಲಿ ಬೆಳಗಲಿ.

ಮುನಿದ ಭೂತಾಯಿಯು ಶಾಂತಳಾಗಲಿ

ಓಂ ದ್ಯೌ: ಶಾಂತಿ ರಂತರಿಕ್ಷ ಶಾಂತಿ
ಪೃಥಿವೀ ಶಾಂತಿ ರಾಪ: ಶಾಂತಿರೋಷಧಯ: ಶಾಂತಿ:
ವನಸ್ಪತಯ: ಶಾಂತಿ ರ್ವಿಶ್ವೇ ದೇವಾ: ಶಾಂತಿ ರ್ಬ್ರಹ್ಮ ಶಾಂತಿ:
ಸರ್ವಂಶಾಂತಿ: ಶಾಂತಿರೇವ ಶಾಂತಿ: ಸಾ ಮಾ ಶಾಂತಿರೇಧಿ
ಓಂ ಶಾಂತಿ: ಶಾಂತಿ: ಶಾಂತಿ:

“ಜ್ಯೋತಿರೂಪೇಣ ಸಂಸ್ಥಿತಾಃ”

Latest News

Related Posts