ಸೌತಡ್ಕ ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ವಿಧಿವಶ
ಕೊಕ್ಕಡದ ಬಯಲು ಆಲಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ (52) ದಿಢೀರ್ ತೀವ್ರ ಅನಾರೊಗ್ಯಕ್ಕೆ ತುತ್ತಾಗಿ, ಎಪ್ರಿಲ್ 14ರಂದು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ವಿಧಿವಶರಾದರು.
ಕೆಲ ದಿನಗಳ ಹಿಂದೆಯಷ್ಟೇ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸೌತಡ್ಕ ದೇಗುಲದ ಗಂಟೆ ಏಲಂ ಪ್ರಕ್ರಿಯೆಯಲ್ಲಿ 1ಕೋಟಿ ರೂಪಾಯಿಗೂ ಅವ್ಯವಹಾರವಾಗಿದೆ ಎಂದು ಆರೋಪಿಸಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರರನ್ನು ಹಗರಣದ ಪ್ರಮುಖ ಆರೋಪಿಯನ್ನಾಗಿಸಿದ್ದರು. ಈ ಬಗ್ಗೆ ತನಿಖೆಗೂ ಆಗ್ರಹಿಸಿದ್ದರು. ತನ್ನ ಮೇಲಿನ ಈ ಆವ್ಯವಹಾರ ಆರೋಪದಿಂದ ಮಾನಸಿಕ ಆಘಾತಕ್ಕೆ ಒಳಗಾದ ಹರಿಶ್ಚಂದ್ರ ನಂತರದ ದಿನಗಳಲ್ಲಿ ವಿಪರೀತ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ. ಹಗರಣದ ತನಿಖೆಯ ಭಾಗವಾಗಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಸ್ಥಾನಕ್ಕೆ ಕೊಕ್ಕಡದ ಕಂದಾಯ ನಿರೀಕ್ಷಕರ ನೇಮಕ ಕೆಲ ದಿನಗಳ ಹಿಂದೆ ನಡೆದಿದ್ದು, ಇದರಿಂದ ಮಾನಸಿಕವಾಗಿ ಮತ್ತಷ್ಟು ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಕುಡಿತದ ಮೊರೆ ಹೋದ ಹರಿಶ್ಚಂದ್ರ ಕಿಡ್ನಿ ಸಮಸ್ಯೆ ಎದುರಿಸಿ, ಎರಡು ದಿನಗಳ ಹಿಂದಷ್ಟೇ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲ್ಪಟ್ಟಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಎಪ್ರಿಲ್ 14ರಂದು ಹರಿಶ್ಚಂದ್ರ ವಿಧಿವಶರಾದರು.








