ಕೊಕ್ಕಡ, ಎ.17: ಕೊರೋನಾ ಹಾವಳಿಯಿಂದ ದೇಶವೇ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಬದಲ್ಲಿ ಕೆಲವು ಕಿಡಿಗೇಡಿಗಳ ಕುಕೃತ್ಯದಿಂದ ಬಡವರಿಗೆ ನೀಡಲಾಗುವ ಆಹಾರವು ಕೂಡಾ ಬಳಸಲು ಸಾಧ್ಯವಾಗದೇ ಇರುವಂತಹಾ ಪರಿಸ್ಥಿತಿ ಕಿಡಿಗೇಡಿಗಳ ಅಮಾನವೀಯತೆಯನ್ನು ಪ್ರಶ್ನಿಸುವ ವಾತಾವರಣ ಸೃಷ್ಟಿ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು ಕೋಮುಸೌಹಾರ್ದ ಕೆಡಿಸುವುದರ ಜೊತೆಗೆ ಬಡ ಕುಟುಂಬದ ಪರಿಸ್ಥಿತಿ ದೇವರು ಕೊಟ್ಟರೂ……ಬಿಡ ಅನ್ನುವಂತಾಗಿದೆ.

ಪಟ್ರಮೆಯ ಗಿರಿಜಾ ಗೌಡ ಕುಟುಂಬಕ್ಕೆ ಗುಡಿಸಲಿನಂತಹಾ ಜೀರ್ಣಾವಸ್ಥೆಯಲ್ಲಿರುವ ಮನೆಯೇ ಆಧಾರವಾಗಿದ್ದು ಮನೆ ನಂಬ್ರದಿಂದ ಹಿಡಿದು ಪಡಿತರ ಚೀಟಿ ಇನ್ಯಾವುದೇ ಸೌಲಭ್ಯಗಳು ಇಲ್ಲದಿರುವುದನ್ನು ಮನಗಂಡು ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮರಾಜ್ ಪಟ್ರಮೆ ಯವರ ವಿನಂತಿಯಂತೆ ನೆಲ್ಯಾಡಿಯ ಒಂದು ಸಂಘಟನೆಯ ವತಿಯಿಂದ ಅಕ್ಕಿ ಸಹಿತ ಆವಶ್ಯಕ ಆಹಾರ ಸಾಮಾಗ್ರಿಗಳ ವಿತರಣೆ ನಡೆಸಲಾಗಿತ್ತು. ಇದಾದ ಬೆನ್ನಿಗೇ ಸ್ಥಳೀಯ ಕೆಲವು ವ್ಯಕ್ತಿಗಳು ಗಿರಿಜಾ ರವರ ಮನೆಗೆ ತೆರಳಿ ಸಂಘಟನೆಯವರು ಕೊಟ್ಟ ಕಿಟ್ ಗೆ ವಿಷ ಬೆರೆಸಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೆ ಸತ್ಯವೆಂದು ನಂಬಿದ ಗಿರಿಜಾರವರು ತಮಗೆ ನೀಡಿದ ಅಕ್ಕಿ ಹಾಗೂ ಇತರೆ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದ ಘಟನೆ ನಡೆದಿದೆ ಎನ್ನಲಾಗುತ್ತಿದೆ. 2 ದಿನಗಳ ಹಿಂದೆ ಬೇರೊಂದು ಸಂಘಟನೆಯಿಂದ ಅಕ್ಕಿ ಹಾಗೂ ಇತರೆ ಅವಶ್ಯಕ ಸಾಮಾಗ್ರಿಗಳ ವಿತರಣೆಗಾಗಿ ಹೋದ ಸಂದರ್ಬದಲ್ಲಿ ಗಿರಿಜಾರವರು ವಿಷ ಹಾಕಿ ಕೊಟ್ಟಿದ್ದಾರೆ ಎಂದು ಕೆಲವು ವ್ಯಕ್ತಿಗಳು ಬಂದು ಹೇಳಿದ್ದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗಡೆ ಇಟ್ಟ ಬಗ್ಗೆ ತಿಳಿಸಿದ ಘಟನೆ ನಡೆದಿದೆ.
ರಾಜಕೀಯ ಮೇಲಾಟಗಳೇನಿದ್ದರೂ ಬಡವರಿಗೆ ನೀಡಲಾದ ಅಕ್ಕಿಗೆ ವಿಷ ಬೆರೆಸಲಾಗಿದೆ ಎಂದು ಹೇಳಿ ಬಡವರ ಹೊಟ್ಟಗೆ ತಣ್ಣೀರೆರಚುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ.
ವಿಶೇಷ ವರದಿ.: ಗುರುಮೂರ್ತಿ.ಎಸ್.ಕೊಕ್ಕಡ.








