ಕಳೆದ 12ದಿನಗಳಿಂದ ಒಂದೇ ಒಂದು ಹೊಸ ಕೊರೋನಾ ಪ್ರಕರಣ ಪತ್ತೆಯಾಗದೇ ಕೊಂಚ ನಿರಾಳವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಎಪ್ರಿಲ್ 17ರಂದು ಆಘಾತ ಕಾದಿತ್ತು. ಉಪ್ಪಿನಂಗಡಿಯ 39ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗಲಿರುವುದು ಪರೀಕ್ಷೆಯಿಂದ ದೃಢ ಪಟ್ಟಿದ್ದು, ಆತನನ್ನು ಇದೀಗ ಚಿಕಿತ್ಸೆಗಾಗಿ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್ನಲಾದ ಈತ, ವಿಚಾರ ಆರೋಗ್ಯ ಇಲಾಖೆಗೆ ತಿಳಿಯುತ್ತಿದ್ದಂತೆ ಕ್ವಾರಂಟೈನಿಗೆ ಒಳಗಾಗಿದ್ದ. ಇದೀಗ ಈತನ ರಕ್ತ ಹಾಗೂ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟೀವ್ ಎಂಬ ವರದಿ ಬಂದಿದ್ದು, ಉಪ್ಪಿನಂಗಡಿ ಪರಿಸರ ಮಾತ್ರವಲ್ಲ; ಜಿಲ್ಲೆಯ ಜನತೆಯನ್ನೇ ಭಯದ ನೆರಳು ಆವರಿಸುವಂತೆ ಮಾಡಿದೆ. ಈತ ದೆಹಲಿಯಿಂದ ಬಂದ ಬಳಿಕ ಕ್ವಾರೆಂಟೈನಿಗೆ ಒಳಗಾಗುವ ಮುನ್ನ ಯಾರನ್ನೆಲ್ಲಾ ಸಂಪರ್ಕಿಸಿದ್ದ ಎಂಬುದನ್ನು ಪತ್ತೆಮಾಡುವ ದೊಡ್ಡ ಜವಾಬ್ದಾರಿ ಪೊಲೀಸ್ ಹಾಗೂ ಜಿಲ್ಲಾಡಳಿತದ ಹೆಗಲೇರಿದೆ. ಎಲ್ಲರೂ ಸಹಕರಿಸಿದರೆ ನಾಡಿಗೇ ಉತ್ತಮ. ಗುಟ್ಟು ಮಾಡಿದರೆ ಅಥವಾ ಭಯದಿಂದ ಸುಮ್ಮನಾದರೆ ಪರಿಣಾಮ ಇನ್ನಷ್ಟು ಗಂಭೀರವಾಗಲಿದೆ. ಈ ನಡುವೆ ಕೊರೋನಾ ಸೋಂಕಿತನ ಮನೆಯ ವಠಾರ ಸೀಲ್ ಡೌನ್ ಆಗಲಿದ್ದು; ಸಂಪೂರ್ಣ ಉಪ್ಪಿನಂಗಡಿ ಗ್ರಾಮವೇ ಕೆಲದಿನಗಳ ಮಟ್ಟಿಗೆ ಸೀಲ್ ಡೌನ್ ಆದರೂ ಅಚ್ಛರಿ ಇಲ್ಲ ಎನ್ನಲಾಗಿದೆ. ಸೋಂಕು ಹರಡುವಿಕೆ ತಡೆಯಲು ಇಂತಹ ಕಠಿಣ ಕ್ರಮ ಅನಿವಾರ್ಯ ಕೂಡಾ.








