ದ.ಕ. ಜಿಲ್ಲೆಯ ಪ್ರವೇಶ ಹಾದಿಗಳು ಕರೊನಾ ದೃಷ್ಟಿಯಿಂದ ಎಷ್ಟು ಸುರಕ್ಷಿತ ?

ದ.ಕ. ಜಿಲ್ಲೆಯ ಪ್ರವೇಶ ಹಾದಿಗಳು ಕರೊನಾ ದೃಷ್ಟಿಯಿಂದ ಎಷ್ಟು ಸುರಕ್ಷಿತ ?
Facebook
Twitter
LinkedIn
WhatsApp

ದ.ಕ. ಜಿಲ್ಲೆಯನ್ನು ರಾಜ್ಯ ರಾಜಧಾನಿ ಮತ್ತಿತರ ಜಿಲ್ಲೆಗಳಿಂದ ಪ್ರವೇಶಿಸುವ ಮುಖ್ಯ ಹಾದಿಗಳಾದ ಶಿರಾಡಿ ಚೆಕ್ ಪೋಸ್ಟ್ ಮತ್ತು ಚಾರ್ಮಾಡಿ ಚೆಕ್ ಪೋಸ್ಟ್ ಗಳು ಜಿಲ್ಲೆಗೆ ಕರೋನಾ ಭಾಧಿತರು ಯಾರಾದರೂ ಎಂಟ್ರಿ ಕೊಡುತ್ತಾರಾ ಎನ್ನುವ ದೃಷ್ಟಿಯಿಂದ ಇಲ್ಲಿನ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಈ ಎರಡೂ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲೂ ಈಗ ಇರುವ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲವೆಂದೇ ಅಂದಾಜಿಸಬಹುದಾಗಿದೆ.
ಕಳೆದ ಒಂದು ವಾರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆಯಲ್ಲಿ ಹೊಸ ಕೇಸುಗಳ ಸಂಖ್ಯೆ ಇಳಿಮುಖವಾಗಿದ್ದರೂ ಶುಕ್ರವಾರದಂದು ಉಪ್ಪಿನಂಗಡಿ ಯಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಪೊಸೇಟಿವ್ ವರದಿ ಆಗಿದೆ. ಇದಕ್ಕೆ ಪೂರಕವಾಗಿ ಎಪ್ರಿಲ್ 16, 17 ರಂದು ಕೊಕ್ಕಡ ಮತ್ತು ಶಿಶಿಲಕ್ಕೆ ದೂರದ ಆಂದ್ರಪ್ರದೇಶ ಮತ್ತು ಬೆಂಗಳೂರಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಬಂದಿರುವ ಘಟನೆಯೊಂದಿಗೆ ಇವರು ಬಂದ ನಂತರ ಫ್ಲೈಯಿಂಗ್ ಸ್ಕ್ವಾಡ್ ಗೆ ಮಾಹಿತಿ ತಿಳಿದು ಒಂದು ದಿನದ ಬಳಿಕ ಇಬ್ಬರನ್ನೂ ಕ್ವಾರಂಟೈನ್ ಗೆ ಒಳಪಡಿಸಿರುವ ಘಟನೆ. ಒಟ್ಟು ಈ ಎಲ್ಲಾ ಘಟನೆಗಳೂ ಈ ಭಾಗದ ಎರಡೂ ಗಡಿ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ವ್ಯವಸ್ಥಿತ ಸಿಬ್ಬಂದಿಗಳ ನಿಯೋಜನೆಯನ್ನು ಕಾರ್ಯಗತ ಗೊಳಿಸುವ ಅನಿವಾರ್ಯತೆ ಇದೆ ಎನ್ನುವುದನ್ನು ಜಿಲ್ಲಾಡಳಿತಕ್ಕೆ ಮುನ್ಸೂಚನೆಯೊಂದಿಗೆ ನೀಡಿದೆ. ಎರಡೂ ಚೆಕ್ ಪೋಸ್ಟ್ ಗಳಲ್ಲಿ ಇದೀಗ ಒಂದು ಪೋಲೀಸ್ ಸಿಬ್ಬಂದಿ, ಒಂದು ಹೋಮ್ ಗಾರ್ಡ್ ಗಳ ನಿಯೋಜನೆ ಮಾತ್ರ ಇದೆ. ದಿನದಲ್ಲಿ ಒಟ್ಟು ಮೂರು ಶಿಪ್ಟ್ ಗಳನ್ನು ಕಳೆದ ಒಂದೆರಡು ದಿನಗಳಿಂದ ಮಾಡಲಾಗಿದೆಯಾದರೂ ಬರುತ್ತಿರುವ ಖಾಸಗಿ ವಾಹನಗಳು ಒಂದಲ್ಲ ಒಂದು ರೀತಿಯ ದೊಡ್ಡ ವ್ಯಕ್ತಿಗಳ, ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ರೆಕಮಂಡ್ ಮಾಡಿರುವ ಲೆಟರ್ ಗಳ ಮೂಲಕ ಪ್ರವೇಶಿಸುತ್ತಿರುವುದರಿಂದ ಇರುವ ಒಂದಿಬ್ಬರು ಪೋಲೀಸರು ಈ ವ್ಯವಸ್ಥೆಯನ್ನು ನಿಭಾಯಿಸುವುದೇ ಸತತ ಒತ್ತಡದಲ್ಲಿ ಎನ್ನುವಂತಾಗಿದೆ ಈ ಚೆಕ್ ಪೋಸ್ಟ್ ಗಳ ಸ್ಥಿತಿ.
ಗಡಿಪ್ರವೇಶಿಸುವ ಪ್ರತೀ ವಾಹನಗಳು ಮತ್ತು ಪ್ರಯಾಣಿಕರ ಕಡ್ಡಾಯ ಮಾಹಿತಿ ಅಗತ್ಯ;
ಈ ವ್ಯವಸ್ಥೆಯನ್ನು ಈ ಮೊದಲೇ ಮಾಡಬೇಕಿತ್ತಾದರೂ ಈಗಲೂ ಕಾಲಮಿಂಚಿಲ್ಲ. ಗಡಿ ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಮನೋಸ್ಥಿತಿಯೇ ಇದನ್ನು ನಿಭಾಯಿಸುವುದು ಹೇಗೆ ಎನ್ನುವ ಪ್ರಶ್ನಾತಿಕ ಚಿಂತನೆಯಲ್ಲಿದೆ. ಮೇಲಾಧಿಕಾರಿಗಳು ತಮ್ಮ ಭಾರವನ್ನು ಈ ಚೆಕ್ ಪೋಸ್ಟಿನ ಸಿಬ್ಬಂದಿಗಳ ಮೇಲೆ ಇಳಿಸಿ ಬಿಟ್ಟಿದ್ದಾರಾದರೂ ಚೆಕ್ ಪೋಸ್ಟ್ ಮೂಲಕ ಪ್ರವೇಶಿಸುವ ವಾಹನಗಳಲ್ಲಿ ಎಷ್ಟು ಮಂದಿ ಪ್ರಯಾಣಿಕರು ಹೊಸದಾಗಿ ಜಿಲ್ಲೆಯ ಯಾವ್ಯಾವ ಪ್ರದೇಶಕ್ಕೆ ತೆರಳುವವರು ಎನ್ನುವ ಮಾಹಿತಿ ದಾಖಲೆಯನ್ನು ಈವರೆಗೂ ಈ ಎರಡೂ ಚೆಕ್ ಪೋಸ್ಟ್ ಗಳಲ್ಲಿ ಇಟ್ಟುಕೊಂಡಿಲ್ಲ. ಇನ್ನಾದರೂ ಕಂದಾಯ ಇಲಾಖೆ, ಆರೋಗ್ಯ ಇಲಾಖೆಗಳ ಸಿಬ್ಬಂದಿಗಳಿರುವ ಒಂದು ಸುಸಜ್ಜಿತ ಮೇಲ್ನೋಟದ ಪರೀಕ್ಷೆಯನ್ನು ಮಾಡಿ ಒಳ ಬರಮಾಡಿಕೊಳ್ಳುವ ವ್ಯವಸ್ಥೆ ಆಗಲೇ ಬೇಕಿದೆ. ಜೊತೆಗೆ ದಿನಂಪ್ರತಿ ತರಕಾರಿ ಇನ್ನಿತರ ಅವಶ್ಯ ವಸ್ತುಗಳ ಸಾಗಾಟಕ್ಕೆ ಹೋಗುವ ನಿಗದಿತ ವ್ಯಕ್ತಿಗಳ ಎಂಟ್ರಿ ಹೊರ ಹೋಗುವಾಗಲೂ, ಒಳ ಪ್ರವೇಶಿಸುವಾಗಲೂ ಕಡ್ಡಾಯ ಮಾಡುವ ಅಗತ್ಯ ಇದೆ. ಈ ಮಾಮೂಲಿ ಅನುಮತಿ ಇರುವ ಜನರಲ್ಲದೆ ಹೊಸದಾಗಿ ಬರುವ ಪ್ರತೀ ವ್ಯಕ್ತಿಗಳ ವಿಳಾಸವನ್ನು ಆಧಾರ್ ಯಾ ಇನ್ನಿತರ ಅಧಿಕೃತ ದಾಖಲೆಗಳ ಮೂಲಕ ಎಂಟ್ರಿ ಮಾಡಿ ಬರಮಾಡಿಕೊಂಡಲ್ಲಿ ಈ ವಿವರಗಳನ್ನು ಪ್ರತೀ ದಿನಾಂತ್ಯ ಪರಿಶೀಲಿಸಿದಾಗ ದಿನವಹಿ ಜಿಲ್ಲೆಗೆ ಹೊಸದಾಗಿ ಎಂಟ್ರಿ ಕೊಟ್ಟವರ ವಿವರಗಳು ಸಂಬಂದಪಟ್ಟ ಆಯಾಯ ಗ್ರಾ.ಪಂ. ಮತ್ತು ಆರೋಗ್ಯ ಇಲಾಖೆಗಳಿಗೆ ನೀಡುವುದು ಅತೀ ಸುಲಭ. ಹೀಗೆ ಮಾಡಿದಲ್ಲಿ ಮಾತ್ರ ಮುಂದಿನ ಲಾಕ್ ಡೌನ್ ಅವಧಿಯೊಳಗೆ ಜಿಲ್ಲೆಯಲ್ಲಿ ಹೊಸ ಕರೊನಾ ಪ್ರಕರಣಗಳು ಉಂಟಾಗುವುದನ್ನು ತಡೆಗಟ್ಟಬಹುದೇ ವಿನಃ ಈ ರೀತಿ ನಿರ್ಲಕ್ಷ್ಯ ವಹಿಸಿದಲ್ಲಿ ಕೊರೋನಾ ಪೀಡಿತ ಪ್ರದೇಶಗಳಿಂದಲೋ, ಯಾ ಇನ್ನಿತರ ರಾಜ್ಯ, ಜಿಲ್ಲೆಗಳಿಂದಲೋ ದಿನಂಪ್ರತಿ ಒಂದಲ್ಲ ಒಂದು ನೆಪದಲ್ಲಿ ಜಿಲ್ಲೆ ಗೆ ಪ್ರವೇಶಿಸುವವರ ಸಂಖ್ಯೆ ನಿಯಂತ್ರಣ ಅಸಾಧ್ಯ. ಅಂತೆಯೇ ಹೀಗೆ ಮಾಹಿತಿಯನ್ನು ಸರಿಯಾಗಿ ನೀಡದೇ ಒಳಪ್ರವೇಶಿಸಿದವ ಸೋಂಕಿತ ನಾಗಿದ್ದಲ್ಲಿ ಆತನನ್ನು ಊರಿನಲ್ಲಿ ಅವರಿವರು , ಗ್ರಾ.ಪಂ. ಕಾರ್ಯಪಡೆಗಳು ಗುರುತಿಸಿ ಹೋಮ್ ಕ್ವಾರಂಟೈನ್ ಒಳಪಡಿಸುವುದರೊಳಗೆ ಸಾಕಷ್ಟು ಮಂದಿಗೆ ಸೋಂಕಿನ ಪ್ರಸಾದ ಹಂಚೋಣವೂ ಆಗಿರುತ್ತದೆ. ಆ ಸಂದರ್ಭ ಗ್ರಾಮವನ್ನೇ ಕ್ವಾರಂಟೈನ್ ಗೊಳಪಡಿಸಲೇ ಬೇಕಾದ ಅನಿವಾರ್ಯತೆಯನ್ನೂ ಸ್ಥಳೀಯಾಡಳಿತಗಳು ಮೈಮೇಲೆ ಹೊತ್ತುಕೊಳ್ಳಬೇಕಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಇನ್ನಾದರೂ ಕೂಡಲೆ ಜಿಲ್ಲೆಯನ್ನು ಪ್ರವೇಶಿಸುವ ಪ್ರತೀ ಹೆಬ್ಬಾಗಿಲಿಗೂ ಒಂದೊಂದು ಸರ್ವ ಸಜ್ಜಿತ ಪೋಲೀಸ್ , ಆರೋಗ್ಯ, ಕಂದಾಯ ಇಲಾಖೆಗಳ ಒಂದು ಸುಸಜ್ಜಿತ ತಂಡಗಳನ್ನು ನಿಯೋಜನೆ ಮಾಡುವ ತುರ್ತು ಅಗತ್ಯ ಇದೆ.

Latest News

Related Posts