ಬೆಳ್ತಂಗಡಿ ಪಟ್ಟಣದಲ್ಲಿ ಪ್ರತೀ ಸಮವಾರ ಸೋಮವಾರ ನಡೆಯುವ ವಾರದ ಸಂತೆಯನ್ನು ಹಳೆಕೋಟೆಯಲ್ಲಿರುವ ಎ.ಪ.ಎಂ.ಸಿ. ಯಾರ್ಡಿಗೆ ಶಿಫ್ಟ್ ಮಾಡಲಾಗಿದೆ.
ಪ್ರತೀ ವಾರದ ಸಂತೆಯ ಸಂದರ್ಭ ಮಾರಾಟಗಾರರು ಮತ್ತು ಗ್ರಾಹಕರು ವೈಯಕ್ತಿಕ ಅಂತರವನ್ನೂ ಕಾಯ್ದುಕೊಳ್ಳದೇ ತಮಗೆ ಅಪಾಯವನ್ನು ಆಹ್ವಾನಿಸುವ ಜೊತೆಗೆ, ಸಮಾಜವನ್ನೂ ಕೊರೋನಾ ಭೀತಿಯೆಡೆಗೆ ತಳ್ಳುತ್ತಿದ್ದುದನ್ನು ಗಮನಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ; ಎಪ್ರಿಲ್ 19ರಂದು ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ತಾಲೂಕಿನ ಸಂಬಂಧಿತ ಇಲಾಖಾಧಿಕಾರಿಗಳ ಸಭೆ ಕರೆದು, ಎಪ್ರಿಲ್ 20ರ ಸೋಮವಾರದಿಂದ ಸಂತೆಯನ್ನು ಎ.ಪಿ.ಎಂ.ಸಿ. ಯಾರ್ಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ತೀರ್ಮಾನ ಕೈಗೊಂಡರು.
ನಂತರ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಎ.ಪಿ.ಎಂ.ಸಿ. ಕಾರ್ಯದರ್ಶಿ ರವೀಂದ್ರರೊಂದಿಗೆ ಎ.ಪಿ.ಎಂ.ಸಿ ಯಾರ್ಡಿನಲ್ಲಿ ಸಂತೆ ನಡೆಸಬಹುದಾದ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಹರೀಶ್ ಪೂಂಜಾ, ಅಧಿಕಾರಿಗಳಿಗೆ ಸೂಕ್ತ ಸಲಹೆ-ಸೂಚನೆ ನೀಡಿದರು. ಶಾಸಕ ಹರೀಶ್ ಪೂಂಜಾರ ಈ ತೀರ್ಮಾನದಿಂದ ತಾಲೂಕಿನಲ್ಲಿ ಕಾನೂನನ್ನು ಗೌರವಿಸುವ ಹಾಗೂ ಕೊರೋನಾ ವಿರುದ್ಧದ ಹೋರಾಟದಲ್ಲಿ ಸರಕಾರದೊಂದಿಗಿರುವ ಬೆಳ್ತಂಗಡಿಯ ನಾಗರಿಕರ ಅವ್ಯಕ್ತ ಭಯ ದೂರವಾಗಿ, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.








