ಮೂಡುಬಿದಿರೆ : ಕೊರೋನಾವೈರಸ್ ಮಹಾಮಾರಿಯ ಅಬ್ಬರ ಮತ್ತು ಈ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಬವಣೆಗೆ ಸರಕಾರದಿಂದ ಸೂಕ್ತ ರೀತಿಯ ಸ್ಪಂದನ ಸಿಗದ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಪ್ರತಿಭಟನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತೀರ್ಮಾನ ಕೈಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಮತ್ತು ಮೂಡುಬಿದಿರೆ ಕ್ಷೇತ್ರ ಕಾಂಗ್ರೆಸ್ ಕಿಸಾನ್ ಘಟಕದ ನೂತನ ಅಧ್ಯಕ್ಷರೂ ಆಗಿರುವ ಆಲ್ವಿನ್ ಎಸ್. ಮಿನೇಜಸ್ ಅವರು ಗಂಟಾಲ್ಕಟ್ಟೆಯ ತಮ್ಮ ಮನೆಯ ತೋಟದಲ್ಲಿ ಮೂಡುಬಿದಿರೆ ಕೃಷಿಕರ ಸಂಘಟನೆ ಸಮೃದ್ಧಿ (ರಿ.) ಇದರ ಆಶ್ರಯದಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರ ಜೊತೆಗೆ ಎಪ್ರಿಲ್ 20ರಂದು ಪ್ರತಿಭಟನೆ ನಡೆಸಿದರು. ಈ ಹೋರಾಟದಲ್ಲೂ ರೈತರು ವೈಯಕ್ತಿಕ ಅಂತರ ಕಾಪಾಡಿಕೊಂಡದ್ದು ಇವರಲ್ಲಿರುವ ಸಾಮಾಜಿಕ ಜಾಗೃತಿಯನ್ನು ತೋರುತ್ತಿತ್ತು.
ಕೊರೋನಾ ಹಾವಳಿಯ ಜೊತೆಗೆ ರೈತರು ತಮ್ಮ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆಯನ್ನು ಪಡೆಯಲಾಗದೆ ಕಷ್ಟ ಅನುಭವಿಸುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇತ್ತ ಗಮನ ಹರಿಸಿ ರೈತರ ಸಂಕಷ್ಟದೊಂದಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಆಲ್ವಿನ್ ಮಿನೇಜಸ್ ಅವರ ಪತ್ನಿ ಪ್ರಮೀಳಾ ಮಿನೇಜಸ್, ಪುತ್ರಿ ಆಶಲ್ ಲಿಯೋನಿ ಮಿನೇಜಸ್, ತೋಟದ ಕಾರ್ಮಿಕ ಭೋಜ, ಸಮೃದ್ಧಿ ರಿ.ಯ ಪದಾಧಿಕಾರಿಗಳಾದ ಅರುಣ್ ಸುನಿಲ್ ಪಿರೇರಾ, ನೆಲ್ಸನ್ ಮಿರಾಂದಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಕೃಷ್ಣಕುಮಾರ್, ಮೂಡಬಿದಿರೆ








