ಸಂಪಾದಕೀಯ

Facebook
Twitter
LinkedIn
WhatsApp

ಕೊರೋನಾ ಸೋಂಕು ದಾಳಿಯ ಭೀತಿಯಿಂದ ಭಾರತ ದೇಶವೇ ಲಾಕ್ ಡೌನ್ ಆಗಿ ತಿಂಗಳೊಂದು ಕಳೆಯಿತು. ಲಾಕ್ ಡೌನ್ ಆದೇಶ ಪಾಲಿಸಿ, ದೇಶದ ಸುಮಾರು 95% ಮಂದಿ ಮನೆಯೊಳಗಿದ್ದು ಕೊರೋನಾ ಮಾರಿಯ ವಿರುದ್ಧದ ಹೋರಾಟದಲ್ಲಿ ಸರಕಾರಗಳಿಗೆ ಸಾಥ್ ನೀಡಿದ್ದಾರೆ. 5%ಗೂ ಕಡಿಮೆ ಮಂದಿ ಗೊತ್ತಿದ್ದೋ-ಗೊತ್ತಿಲ್ಲದೆಯೋ ಲಾಕ್ ಡೌನ್ ನಿಯಮ‌ ಮುರಿಯುವುದರ ಜೊತೆಗೆ, ಕೊರೋನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಸರಕಾರದೊಂದಿಗೆ ಅಸಹಕಾರ ತೋರುತ್ತಿದ್ದಾರೆ. ಸರಕಾರಗಳ ಎಲ್ಲ ಪ್ರಯತ್ನಗಳ ನಡುವೆಯೂ ಕೊರೋನಾ ಸೋಂಕು ಮನುಕುಲಕ್ಕೇ ಸವಾಲು ಹಾಕುವ ರೀತಿಯಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮೇ 3ರ ಬಳಿಕವೂ ಲಾಕ್ ಡೌನ್ ಅವಧಿ ವಿಸ್ತರಿಸಬೇಕಾದ ಅನಿವಾರ್ಯತೆ ಸರಕಾರಗಳಿಗೆ ಸೃಷ್ಟಿಯಾದರೂ ಅಚ್ಛರಿ ಇಲ್ಲ. ಈ ಲಾಕ್ ಡೌನ್ ಅವಧಿಯಲ್ಲಿ ಕೆಲ ರಾಜ್ಯ ಸರಕಾರಗಳು ಕೇಂದ್ರ ಸರಕಾರ ನೀಡಿದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ; ತಾನೂ ಜನತೆಗೆ ಒಂದಷ್ಟು ನಿಬಂಧನೆಗಳನ್ನು ಹೇರಿ ಕೊರೋನಾ ಸೋಂಕಿನ ನಿಯಂತ್ರಣ ಸಾಧಿಸುವಲ್ಲಿ ಭಾಗಶಃ ಯಶಸ್ಸು ಸಾಧಿಸಿದ್ದಾರೆ. ಇಂತಹ ಭಾಗಶಃ ಯಶಸ್ಸು ಸಾಧಿಸಿದ ರಾಜ್ಯಗಳಲ್ಲಿ ನಮ್ಮ ನೆರೆಯ ಕೇರಳ ರಾಜ್ಯ ಮುಂಚೂಣಿಯಲ್ಲಿದೆ. ಇದೀಗ ಕೇರಳದಲ್ಲಿ ಕೊರೋನಾ ಸೋಂಕು ಬಹುತೇಕ ನಿಯಂತ್ರಣದಲ್ಲಿದ್ದು, ಜನಜೀವನವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಅಲ್ಲಿನ ಸರಕಾರ ನಿಧಾನವಾಗಿ ಹೆಜ್ಜೆ ಇಡಲಾರಂಭಿಸಿದೆ. ಒಂದರ್ಥದಲ್ಲಿ ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಕೇರಳ ರಾಜ್ಯ ಸರಕಾರ ಇತರರಿಗೆ ಮಾದರಿ ಎಂದರೂ ತಪ್ಪಾಗಲಾರದು. ರಾಜ್ಯ ಸರಕಾರದ ಸೂಚನೆ-ನಿರ್ದೇಶನಗಳನ್ನು ಕಾನೂನಿನ ಮೇಲಿನ ಗೌರವದಿಂದಲೋ ಅಥವಾ ಪೊಲೀಸರ ಲಾಠಿ ಮತ್ತು ಕಠಿಣ ಕಾನೂನು ಕ್ರಮದ ಭಯದಿಂದಲೋ ಪಾಲಿಸುತ್ತಿದ್ದ ಕೇರಳದ ಜನತೆಗೂ ಈ ಯಶಸ್ಸಿನಲ್ಲಿ ಪಾಲು ಸಿಗಬೇಕು.
ಇನ್ನು ನಮ್ಮ ಕರ್ನಾಟಕ ರಾಜ್ಯ ಸರಕಾರ ಲಾಕ್ ಡೌನಿನ‌ಮೊದಲ ದಿನದಿಂದಲೇ ಎಡವಟ್ಟುಗಳನ್ನು ನಡೆಸುತ್ತಾ ಬಂತು. ಕೊರೋನಾ ಸೋಂಕಿನ ತಡೆಗೆ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ ಮೊದಲ ದಿನವೇ ಕೇಂದ್ರ ಸರಕಾರದ ಗೈಡ್ ಲೈನನ್ನು ಸಂಪೂರ್ಣ ಪಾಲಿಸಲು ಮುಂದಾದ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರವರ ವೇಗಕ್ಕೆ ಆರಂಭದಲ್ಲೇ ಬ್ರೇಕ್ ಹಾಕಿದ ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ವಿನಾಯಿತಿ ಘೋಷಿಸುವ ನೆಪದಲ್ಲಿ ಜನತೆಯ ಮನಗೆಲ್ಲುವ ಅಗ್ಗದ ಮನಸ್ಸು ತೋರಿದರು. ಲಾಕ್ ಡೌನ್ ನಿಯಮಾವಳಿ‌ ಜ್ಯಾರಿ ವಿಚಾರದಲ್ಲಿ ರಾಜ್ಯದಲ್ಲಿ ಈ ರೀತಿ ಆರಂಭವಾದ ಶಾಸಕಾಂಗ-ಕಾರ್ಯಾಂಗಗಳ ಮುಸುಕಿನ ಗುದ್ದಾಟ ಪೊಲೀಸ್ ಇಲಾಖೆ ಮಾತ್ರವಲ್ಲದೇ ಆರೋಗ್ಯ, ಶಿಕ್ಷಣ ಸಹಿತ ಎಲ್ಲ ಕ್ಷೇತ್ರಗಳಲ್ಲಿ‌ ಮುಂದುವರೆದು; ಕೊರೋನಾ ಸೋಂಕಿನ‌ ವಿರುದ್ಧದ ಹೋರಾಟಕ್ಕಿಂತ ಹೆಚ್ಚಿನ ಸಮಯ ಹಾಗೂ ಶ್ರಮ ಇವರುಗಳ ಮೇಲಾಟಕ್ಕೇ ವ್ಯರ್ಥವಾಯಿತು. ಇದರೊಂದಿಗೆ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರವರೂ ದಿನಕ್ಕೊಂದು ಹೇಳಿಕೆ ನೀಡುತ್ತಾ ಜನತೆಯಲ್ಲಿ ಗೊಂದಲ ಮೂಡಿಸಿದರು. ಲಾಕ್ ಡೌನಿನ ಆರಂಭದ ದಿನಗಳಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಯಾರೂ ಹೋಗದಂತೆ ನಿರ್ಬಂಧ ವಿಧಿಸಿದ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಮರುದಿನ ಪತ್ರಿಕಾಗೋಷ್ಟಿಯಲ್ಲೇ ಹೇಳಿಕೆ ನೀಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾರ್ಚ್ 24ರ ಯುಗಾದಿಯ ಮುನ್ನಾದಿನ ಎಲ್ಲ ಜಿಲ್ಲೆಗಳ ಗೇಟ್ ಓಪನ್ ಮಾಡಿ, ಬೆಂಗಳೂರಿಂದ ಹೊರಹೋಗುವವರು ತಕ್ಷಣ ಹೊರಡಬೇಕು ಎಂದು ಫರ್ಮಾನು ಹೊರಡಿಸಿ ಇಡೀ ರಾಜ್ಯದಲ್ಲಿ‌ ಭಯ ಹಾಗೂ ಗೊಂದಲ‌ ಮೂಡಿಸಿದರು. ಈ ರೀತಿಯಾಗಿ ಲಾಕ್ ಡೌನ್ ಅನುಷ್ಠಾನದಲ್ಲಿ ಆರಂಭವಾದ ಇವರ ತುಘಲಕ್ ದರ್ಬಾರ್, ಮೊನ್ನೆ ದಿನ ದ್ವಿಚಕ್ರ ವಾಹನ ಸವಾರರಿಗೆ ಮುಕ್ತ ಸಂಚಾರಕ್ಕೆ ಅವಕಾಶ, ಐಟಿ-ಬಿಟಿ ಕಂಪೆನಿಗಳ ಕಾರ್ಯಾರಂಭ, 33%ನೌಕರರಿಗೆ ಕಛೇರಿಗೆ ತೆರಳಲು ಅನುಮತಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಒಂದಷ್ಟು ಕೈಗಾರಿಕೆ ಆರಂಭಕ್ಕೆ ಅನುಮತಿ ನೀಡುವಷ್ಟರ ಮಟ್ಟಿಗೆ ಮುಂದುವರೆದಿತ್ತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಪ್ರಕಟಣೆ ಎಪ್ರಿಲ್ 18ರ ಬೆಳಿಗ್ಗೆ ಮಾಡಿದರೆ; ಸಂಜೆ ಈ ಎಲ್ಲ ತೀರ್ಮಾನಗಳು ರದ್ದಾದ ಹೇಳಿಕೆ ಹೊರಬಿತ್ತು. ಮೇ 3ರ ವರೆಗೆ ಲಾಕ್ ಡೌನ್ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು; ಯಾವುದೇ ಸಡಿಲಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಈ ರೀತಿಯಾಗಿ ಲಾಕ್ ಡೌನ್ ಘೋಷಣೆಯಾದ ದಿನದಿಂದ ನಿನ್ನೆಯವರೆಗೂ ಪ್ರತಿಯೊಂದು ಹೆಜ್ಜೆಯಲ್ಲೂ ದ್ವಿಮುಖ ನೀತಿಯನ್ನು ಅನುಸರಿಸಿದ ರಾಜ್ಯ ಸರಕಾರ ಬಹುತೇಕ ಜನತೆಯ ಸಹಕಾರದ ನಡುವೆಯೂ ತನ್ನದೇ ಎಡವಟ್ಟಿನಿಂದ ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.
ಎಲ್ಲಿಯ ತನಕ ರಾಜ್ಯ ಸರಕಾರದ ಇಬ್ಬಗೆ ಧೋರಣೆ ಇತ್ತೆಂದರೆ ಕೊರೋನಾ ವಿರುದ್ಧ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರ ರಕ್ಷಣೆ ನಮ್ಮ ಜವಾಬ್ದಾರಿ ಎಂಬುದನ್ನೂ ರಾಜ್ಯ ಸರಕಾರ ಮರೆತಂತಿತ್ತು. ಪರಿಣಾಮವಾಗಿ‌‌ ರಾಜ್ಯದ ಸಾಕಷ್ಟು ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ, ವೈದ್ಯರ ಸಹಿತ ಆರೋಗ್ಯ ಇಲಾಖೆಯ ಸಿಬ್ಬಂದಿಗಳ‌ ಮೇಲೆ ಮಾತ್ರವಲ್ಲದೇ, ಪೊಲೀಸರ ಮೇಲೂ ದಾಳಿಗಳು ನಡೆಯಿತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪೊಲೀಸರನ್ನ ಲಾಠಿ ಬಳಸದೇ ಜನಸ್ನೇಹಿಯಾಗಿರಿ ಎಂದು ಸೂಚಿಸುವ ದುಸ್ಸಾಹಸಕ್ಕೆ ರಾಜ್ಯದ ಮುಖ್ಯಮಂತ್ರಿ ಸಹಿತ ಸಚಿವ ಸಂಪುಟದ ಸದಸ್ಯರು ಮುಂದಾಗದಿರುತ್ತಿದ್ದಲ್ಲಿ, ಪೊಲೀಸರು ಇಂತಹ ದಾಳಿ ನಡೆಸಬಹುದಾದ ಸಮಾಜದ್ರೋಹಿ ಗಳನ್ನು ಯಾವಾಗಲೋ ಹೆಡೆಮುರಿ ಕಟ್ಟುತ್ತಿದ್ದರು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಲು ರಾಜ್ಯ ಸರಕಾರದ ತಪ್ಪು ನಿರ್ಧಾರಗಳು ಸಮಾಜಘಾತುಕರಿಗೆ ಒಂದಷ್ಟು ಅವಕಾಶ ಕಲ್ಪಿಸಿತು ಎಂದರೂ ತಪ್ಪಾಗದು.
ರಾಜ್ಯ ಸರಕಾರ ಬೆಂಗಳೂರಿನ ಪಾದರಾಯನಪುರದಲ್ಲಿ ಎಪ್ರಿಲ್ 19ರ ರಾತ್ರಿ ನಡೆದ ಪೊಲೀಸರ ಮೇಲಿನ ದಾಳಿಯಿಂದಲಾದರೂ ಎಚ್ಚೆತ್ತುಕೊಳ್ಳಬೇಕು. ಇಂತಹ ಸಮಾಜದ್ರೋಹಿಗಳನ್ನು ಮಟ್ಟಹಾಕಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಇಂತಹ ಸಮಾಜದ್ರೋಹಿಗಳು ಪಾದರಾಯಣಪುರದಲ್ಲಿ ಮಾತ್ರ ಇರುವುದಲ್ಲ ಎಂಬ ಸತ್ಯದ ಅರಿವು ಸರಕಾರಕ್ಕಿರಬೇಕು. ಇಂಥಹ ದುಷ್ಟ ಶಕ್ತಿಗಳನ್ನು ಹುಡುಕಿ ಹೊಸಕಿ ಹಾಕಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ಮತ್ತು ಶಕ್ತಿ ನೀಡಬೇಕು. ಇಂತಹ ದೇಶದ್ರೋಹಿ ಘಟನೆಗಳು ಸಂಭವಿಸಿದ ಬಳಿಕ ಆರೋಪಿ ಸಮಾಜಘಾತುಕರನ್ನು ಬಂಧಿಸಿ ಜೈಲಿಗಟ್ಟೋದು, ಘಟನೆಯ ಬಗ್ಗೆ ವೀರಾವೇಶದ ಹೇಳಿಕೆ ನೀಡಿ ರಾಜಕೀಯ‌ ಮೈಲೇಜ್ ಪಡೆಯೋದು ಮಹತ್ಸಾದನೆಯಲ್ಲ. ಇಂತಹ ದೇಶದ್ರೋಹದ ದುಷ್ಕೃತ್ಯ ನಡೆಯದಂತೆ ದುಷ್ಟಶಕ್ತಿಗಳನ್ನು ಹುಡುಕಿ ಅವರ ಏರಿಯಾದಲ್ಲೇ ಮಟ್ಟ ಹಾಕಬೇಕಾದರೆ ರಾಜ್ಯ ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಸಂಪೂರ್ಣ ಫ್ರೀಹ್ಯಾಂಡ್‌ ನೀಡಬೇಕು. ಆಗ ಮಾತ್ರ ಈ ದೇಶದ್ರೋಹಿಗಳಿಗೆ ಖಾಕಿ ಪವರ್ ತೋರಿಸಲು ಸಾಧ್ಯ. ಅಂತಹ ಇಚ್ಛಾಶಕ್ತಿಯನ್ನು ರಾಜ್ಯ ಸರಕಾರ ತೋರುತ್ತಾ…ಆ ಮೂಲಕ ಕೊರೋನಾ ಸೋಂಕಿನ ವಿರುದ್ಧ ದೃಢ ಹೋರಾಟಕ್ಕೆ ರಾಜ್ಯ‌ ಮುಂದಾಗುತ್ತಾ ಎಂಬುದು‌ ಮಿಲಿಯನ್ ಡಾಲರ್‌ ಪ್ರಶ್ನೆ. ಉತ್ತರಿಸಬೇಕಾದವರು ತಮ್ಮ ತೀರ್ಮಾನಗಳ‌ ಮೂಲಕ ಉತ್ತರಿಸುವಂತಾಗಲಿ.

Latest News

Related Posts