ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರಸಿರುವ ಅನುಮಾನ ವ್ಯಕ್ತವಾಗಿದ್ದು ಮೀನುಗಳ ಮಾರಣಹೋಮವಾಗಿವೆ.

ಬೆಳ್ತಂಗಡಿ ನಗರ ಪಂಚಾಯತದ ಕುಡಿಯುವ ನೀರಿನ ಪಂಪುಹೌಸ್ ಬಳಿಯ ಸೋಮವತಿ ನದಿಯ ಗುಂಡಿಯಲ್ಲಿ ಎಪ್ರಿಲ್ 20ರ ರಾತ್ರಿ ಕಿಡಿಗೇಡಿಗಳು ಸ್ಫೋಟಕ ಬೆರೆಸಿ ಮೀನು ಹಿಡಿಯಲು ಯತ್ನಿಸಿ, ನೀರನ್ನು ಕುಲುಷಿತಗೊಳಿಸಿದ ಪರಿಣಾವಾಗಿ ಮೀನುಗಳು ಸಾವನ್ನಪ್ಪಿವೆ.
ರಾತ್ರಿ ಐದಾರು ಮಂದಿಯ ತಂಡ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ ಠಾಣೆಯ ಎಸ್.ಐ. ನಂದಕುಮಾರ್ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದಾಗ ಕಿಡಿಗೇಡಿಗಳು ಕತ್ತಲಲ್ಲಿ ಪರಾರಿಯಾದ್ದಾರೆ. ಬಹುತೇಕ ದೊಡ್ಡ ಮೀನುಗಳು ಸತ್ತು ಹೋಗಿವೆ.
ಘಟನಾ ಸ್ಥಳಕ್ಕೆ ಮುಖ್ಯಾಧಿಕಾರಿ ಸುಧಾಕರ್, ನ.ಪಂ. ಸದಸ್ಯ ಶರತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನದಿ ಪಾತ್ರದಿಂದ ಸುಮಾರು 10 ದಿನಗಳಿಗೆ ಬಳಕೆಯಾಗುವಷ್ಟು ಇದ್ದ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಸೂಕ್ತ ಕ್ರಮಕ್ಕಾಗಿ ನ.ಪಂ. ಮುಖ್ಯಾಧಿಕಾರಿ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ.








