ನೆಲ್ಯಾಡಿ, ಎ. 21: ನೆಲ್ಯಾಡಿ ಕ್ಷೇತ್ರದ ತಾ.ಪಂ.ಸದಸ್ಯೆ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯೂ ಆಗಿರುವ ಉಷಾ ಅಂಚನ್‍ರವರು ತಮ್ಮ ತಾ.ಪಂ.ಕ್ಷೇತ್ರ ವ್ಯಾಪ್ತಿಯ ನೆಲ್ಯಾಡಿ, ಕೊಣಾಲು ಹಾಗೂ ಆಲಂತಾಯ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕಿ ಹಾಗೂ ಆಹಾರ ಸಾಮಾಗ್ರಿ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಉಷಾ ಅಂಚನ್‍ರವರು, ಆಶಾ ಕಾರ್ಯಕರ್ತೆಯರು ವೈದ್ಯರು, ಆರೋಗ್ಯ ಸಹಾಯಕಿಯರಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಮಹಾಮಾರಿ ಒಕ್ಕರಿಸಿಕೊಂಡಿರುವ ಸಂಕಷ್ಟ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಉಳಿದವರ ಪ್ರಾಣ ರಕ್ಷಣೆಗೆ ಬಿಸಿಲು ಲೆಕ್ಕಿಸದೇ ದುಡಿಯುತ್ತಿದ್ದಾರೆ. ಇವರ ಸಂಕಷ್ಟಕ್ಕೆ ನೆರವಾಗಬೇಕೆಂಬ ಹಿನ್ನೆಲೆಯಲ್ಲಿ ನೆಲ್ಯಾಡಿ, ಕೊಣಾಲು ಹಾಗೂ ಆಲಂತಾಯ ಗ್ರಾಮಗಳಲ್ಲಿ ಕೆಲಸ ಮಾಡುತ್ತಿರುವ 12 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ 10 ಕೆ.ಜಿ.,ಅಕ್ಕಿ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡುತ್ತಿದ್ದೇವೆ. ಅವರ ಸೇವೆ ಗುರುತಿಸಿ ಕಿಂಚಿತ್ ಸಹಾಯ ನೀಡುತ್ತಿದ್ದೇವೆ ಎಂದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್, ನೆಲ್ಯಾಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ, ಕೌಕ್ರಾಡಿ ಗ್ರಾ.ಪಂ.ಸದಸ್ಯರೂ ಆಗಿರುವ ರವಿಪ್ರಸಾದ್ ಗುತ್ತಿನಮನೆ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಅಬ್ರಹಾಂ ಕೆ.ಪಿ., ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜನಾರ್ದನ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಪಿಡಿಒ ಮಂಜುಳ ಎನ್., ಗೋಳಿತ್ತೊಟ್ಟು ಗ್ರಾ.ಪಂ.ಪಿಡಿಒ ನಯನಕುಮಾರಿ, ನೆಲ್ಯಾಡಿ ಹೊರಠಾಣಾ ಹೆಡ್‍ಕಾನ್ಸ್‍ಟೇಬಲ್‍ಗಳಾದ ಹರಿಶ್ಚಂದ್ರ, ಸಂಗಯ್ಯ, ನೆಲ್ಯಾಡಿ ವಲಯ ಬಂಟರ ಸಂಘದ ಕಾರ್ಯದರ್ಶಿ ವಾಣಿಸುಂದರ ಶೆಟ್ಟಿ ನೆಲ್ಯಾಡಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯ ಸ್ವಾಗತಿಸಿದರು.
ಆಹಾರ ಸಾಮಾಗ್ರಿಗಳ ಕಿಟ್ ಸ್ವೀಕರಿಸಿ ಮಾತನಾಡಿದ ಆಶಾ ಕಾರ್ಯಕರ್ತೆ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯೆಯೂ ಆಗಿರುವ ವಾಣಿ ಶೆಟ್ಟಿಯವರು, ಕೊರೋನಾ ವೈರಸ್ ಬಂದ ಬಳಿಕ ಪ್ರತಿದಿನ ಮನೆ ಮನೆಗೆ ಭೇಟಿ ನೀಡುತ್ತಿದ್ದೇವೆ. ಸಕಾಲದಲ್ಲಿ ಎಲ್ಲಾ ವಿವರ ಒದಗಿಸಿಕೊಡುತ್ತಿದ್ದೇವೆ. ಆದರೆ ವೈದ್ಯರು, ಆರೋಗ್ಯ ಸಹಾಯಕಿಯರ ಹೊರತು ಯಾರೂ ನಮ್ಮ ಹಸಿವಿನ ಬಗ್ಗೆ, ಆರೋಗ್ಯ ಬಗ್ಗೆ ವಿಚಾರಿಸಿಲ್ಲ, ನಮ್ಮ ಕಷ್ಟ ತಿಳಿದು ಸಹಾಯಕ್ಕೆ ಮುಂದೆ ಬಂದಿರುವ ತಾ.ಪಂ.ಸದಸ್ಯೆ ಉಷಾ ಅಂಚನ್‍ರವರ ಸೇವೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ನೆಲ್ಯಾಡಿ ಗ್ರಾ.ಪಂ.ಸದಸ್ಯೆ, ಆಶಾ ಕಾರ್ಯಕರ್ತೆಯೂ ಆಗಿರುವ ಲೈಲಾ ತೋಮಸ್‍ರವರು ಕೃತಜ್ಞತೆ ಸೂಚಿಸಿ ಮಾತನಾಡಿದರು.








