ಪ್ರಧಾನಿ ಮನವಿಗೆ ಜನತೆಯಿಂದ ಒಳ್ಳೆಯ ಸ್ಪಂದನ- ಡಾl ಹೆಗ್ಗಡೆ
ಕೊರೊನ ಮುಕ್ತ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ದೇಶದ ಜನತೆ ಉತ್ತಮವಾಗಿ ಸಹಕರಿಸಿದ್ದಾರೆ. ಜನರು ಶಿಸ್ತಿನಿಂದ ಆದೇಶವನ್ನು ಪಾಲನೆ ಮಾಡಿ ಜಿಲ್ಲೆಯಲ್ಲೂ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಧರ್ಮಸ್ಥಳದಲ್ಲಿ ಎ.23ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣಬನ್ನಿ ತಂಡದ ಸಹಕಾರದಲ್ಲಿ ನಡೆದ 30,000 ಆಹಾರ ಕಿಟ್ ಗಳನ್ನು ಸಾಂಕೇತಿಕವಾಗಿ ವಿತರಿಸಿ, ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು
ಕೊರೋನಾ ಸೋಂಕು ತಡೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ನಿರ್ಧಾರ ತೆಗೆದು ಕೊಂಡಿದ್ದು ಆದಷ್ಟು ಬೇಗ ದೇಶವು ಸಾಮಾನ್ಯ ಸ್ಥಿತಿ ಗೆ ಬಂದು ಕೃಷಿ ಹಾಗೂ ಇತರ ಚಟುವಟಿಕೆಗಳು ಸಲೀಸಾಗಿ ನಡೆಯುವಂತಾಗಲಿ ಎಂದು ಮಂಜುನಾಥ ಸ್ವಾಮಿ ಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ವಿಶ್ವಾದ್ಯಂತ ಕೊರೋನಾ ವೈರಸ್ ನ ಭೀತಿ-ಬಾಧೆ ಉಂಟಾಗಿದ್ದು ಭಾರತದಲ್ಲಿ ಇದರ ಹಾವಳಿಯನ್ನು ತಕ್ಕಮಟ್ಟಿಗೆ ಯಶಸ್ವಿಯಾಗಿ ತಡೆದಿದ್ದೇವೆ ಎಂದ ಡಾ. ಹೆಗ್ಗಡೆ; ಕಳೆದ 40 ದಿನಗಳಿಂದ ಧರ್ಮಸ್ಥಳದ ಮಹಾದ್ವಾರ ದಾಟಿ ಹೊರಗೆ ಹೋಗಿಲ್ಲ ಅಂತೆಯೇ ಪೀಠದಲ್ಲೂ ಕೂತಿಲ್ಲ ಎಂದು ಹೆಗ್ಗಡೆಯವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತಿನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಣ ಶಶಿಧರ ಕಲ್ಮಂಜ, ಅಳದಂಗಡಿ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ಬೆಳ್ತಂಗಡಿ ಮಂಡಲ ಬಿಜೆಪಿಯ ಜಯಂತ ಕೋಟ್ಯಾನ್, ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ, ಮೋಹನ್ ಕುಮಾರ್ ಉಜಿರೆ, ರಾಜೇಶ್ ಪೈ ಉಜಿರೆ, ಸುರೇಂದ್ರ ಕುಮಾರ್ ಧರ್ಮಸ್ಥಳ ಮತ್ತಿತರರು ಹಾಜರಿದ್ದರು.








