ವೈಯಕ್ತಿಕ ಅಂತರಕ್ಕೆ ಸವಾಲಾದ ಮಾಧ್ಯಮ‌ ಮೈಕ್ ಗಳು

ವೈಯಕ್ತಿಕ ಅಂತರಕ್ಕೆ ಸವಾಲಾದ ಮಾಧ್ಯಮ‌ ಮೈಕ್ ಗಳು
Facebook
Twitter
LinkedIn
WhatsApp
ವರದಿಗಾರ್ತಿ ಮಾಸ್ಕ್ ಧರಿಸದೇ ಮೈಕ್ ಹಿಡಿದಿರೋದು

ಈ ಸತ್ಯವನ್ನು ಹೇಳಿದರೆ ದೃಶ್ಯ ಮಾಧ್ಯಮದವರು ಹಾಗೂ ಆನ್ ಲೈನ್ ಮಾಧ್ಯಮದ ಕೆಲವರು ನನ್ನ ಮೇಲೆ ಹರಿಹಾಯ್ದಾರು. ಮುಂಬಯಿಯಲ್ಲಿ 53 ಮಂದಿ ನನ್ನ ಮಾಧ್ಯಮ ಸಹೋದರರು ಕೊರೋನಾ ಸೋಂಕು ತಗಲಿಸಿಕೊಂಡ ಮೇಲೆ ಓರ್ವ ಪತ್ರಿಕಾ ಸಂಪಾದಕನಾಗಿ ನಾನು ಈ ಸತ್ಯವನ್ನು ಹೇಳಲೇ ಬೇಕಾಗಿದೆ. ನಿಮಗೆ ಅಚ್ಚರಿಯಾಗಬಹುದು ನಾನ್ಯಾಕೆ ‘ಮುಂಬಯಿಯ ನನ್ನ‌ ಮಾಧ್ಯಮ ಸಹೋದರರು ಕೊರೋನಾ ಸೋಂಕು ತಗಲಿಸಿಕೊಂಡರು’ ಎಂದು ಉಲ್ಲೇಖ‌ ಮಾಡಿದೆ ಎಂಬ ಬಗ್ಗೆ. ಪ್ರಾಯಶಃ ಮುಂಬಯಿಯ ಈ ಮಾಧ್ಯಮ ಸಹೋದರರು ಲಾಕ್ ಡೌನ್ ಸಂದರ್ಭದಲ್ಲಿ ಈ ರೀತಿಯಾಗಿ ಮೈಕ್ ಹಿಡಿದು ಸುದ್ದಿಯ ಹಿಂದೆ ಬೀಳದಿರುತ್ತಿದ್ದರೆ ಅವರ್ಯಾರಿಗೂ ಕೊರೋನಾ ಸೋಂಕು ತಗುಲಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ.
ಎಪ್ರಿಲ್ 23ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಅತ್ಯಂತ ಸರಳ‌ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗೆಡೆಯವರು ಕೊರೋನಾ ಸೋಂಕು ತಡೆಗಾಗಿ ಸರಕಾರ ವಿಧಿಸಿದ ಲಾಕ್ ಡೌನಿನಿಂದ ಕಂಗಾಲಾದ ಬೆಳ್ತಂಗಡಿ ತಾಲೂಕಿನ 30,000 ಕುಟುಂಬಗಳಿಗೆ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಕೊಡಮಾಡಲಾದ ಆಹಾರ ಕಿಟ್ ಗಳ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತನ್ನ ಸಂದೇಶ ನೀಡಲು ಹೊರಟ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮುಂದೆಯೇ ಒಂದಿಬ್ಬರು ಮಾಧ್ಯಮದವರು ಮೈಕ್ ಹಿಡಿದರು. ಆದರೆ ಇದು ಬೇಕಿತ್ತಾ ಎಂಬುದು ಪ್ರಶ್ನೆ. ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಸಂದೇಶವನ್ನು ಆನ್ ಲೈನಿನಲ್ಲಿ ಹಾಗೂ ಪತ್ರಿಕಾ ಮಾಧ್ಯಮದಲ್ಲಿ ವರದಿ ಮಾಡಲು ಅವಕಾಶವಿದೆ. ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ನಮಗೆ ನಾವೇ ವಿವಿಧ ನಿಬಂಧನೆಗಳನ್ನು ಹೇರಿಕೊಳ್ಳಬೇಕಾದ ಇಂದಿನ ದಿನಗಳಲ್ಲಿ ಇತರರನ್ನು ವೈಯಕ್ತಿಕ ಅಂತರ ಕಾಪಾಡಬೇಕಾದ ಅನಿವಾರ್ಯತೆಯ ಬಗ್ಗೆ ಎಚ್ಚರಿಸಬೇಕಾದ ಮಾಧ್ಯಮದವರೇ ನಾಡಿನ ಗಣ್ಯಾತಿಗಣ್ಯರ ಎದುರು ವೈಯಕ್ತಿಕ ಅಂತರ ಮರೆತು ಮೈಕ್ ಹಿಡಿಯೋದು ಎಷ್ಟು ಸರಿ….ಈಗಾಗಲೇ ಮುಂಬಯಿಯಲ್ಲಿ ವರದಿ ಮಾಡುವ ಧಾವಂತದಲ್ಲಿ 53ಮಂದಿ ಮಾಧ್ಯಮದ ಸಹೋದರರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಮಾಧ್ಯಮ ಮಿತ್ರರ ಮೈಕಿನಿಂದ ಮುಂಬಯಿಯಲ್ಲಿ ಇನ್ನೆಷ್ಟು ಮಂದಿಗೆ ಕೊರೋನಾ ಸೋಂಕು ಹರಡಿದೆಯೋ ಸರ್ವಶಕ್ತನೇ ಬಲ್ಲ.
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಈ ವಿಚಾರದಲ್ಲಿ ತೆಗೆದುಕೊಂಡ ನಿಲುವು ಸ್ವಾಗತಾರ್ಹ. ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹೇಳಿಕೆಯೊಂದನ್ನು ನೀಡಿ, ಕೊರೋನಾ ಸೋಂಕು ಹರಡುವಿಕೆಯ ಮುಂಜಾಗ್ರತಾ ಕ್ರಮವಾಗಿ ಸರಕಾರ ಘೋಷಿಸಿದ ಲಾಕ್ ಡೌನ್ ಅವಧಿ ಮುಗಿಯುವ ತನಕ ಎಲ್ಲ ಜನಪ್ರತಿನಿಧಿ ಸಹಿತ ಗಣ್ಯರು ಪತ್ರಿಕಾಗೋಷ್ಟಿಗಳನ್ನು ನಡೆಸದಂತೆ ವಿನಂತಿಸಿದ್ದಾರಲ್ಲದೇ; ಎಲ್ಲವೂ ಪತ್ರಿಕಾ ಹೇಳಿಕೆಗಷ್ಟೇ ಸೀಮಿತವಾಗಿರಲಿ ಎಂದು ವಿನಂತಿಸಿದ್ದಾರೆ. ಆ ಮೂಲಕ ಮಾಧ್ಯಮ ಮಿತ್ರರೂ ವೈಯಕ್ತಿಕ ಅಂತರ ಕಾಪಾಡಬೇಕಾದ ಅಗತ್ಯತೆಯನ್ನು ತಿಳಿಹೇಳಿದ್ದಾರೆ. ಮಾಧ್ಯಮದ ಸಹೋದರರು ವರದಿ ಮಾಡುವ ಧಾವಂತದಲ್ಲಿ ತಾವು ಅಪಾಯವನ್ನು ಮೈಮೇಲೆ ಎಳೆದುಕೊಂಡು, ಇತರರನ್ನೂ ಅಪಾಯಕ್ಕೆ ತಳ್ಳುವಂತಾಗದಿರಲಿ. ವೈಯಕ್ತಿಕ ಅಂತರ ಹಾಗೂ‌ ಮಾಸ್ಕ್ ನಮ್ಮ ಪ್ರತೀ ಹೆಜ್ಜೆಯ ಮಂತ್ರವಾಗಿರಲಿ.

Latest News

Related Posts