ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ರಾಜ್ಯದಲ್ಲಿ ಲಾಕ್ ಡೌನ್ ಇದ್ದರೂ ಸಮಾಜದ ಈ ಹೋರಾಟಕ್ಕೆ ವಿರೋಧಾಭಾಸ ಆಗುವಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೊಳಿಸಿದೆ ಎಂದು ರಾಜ್ಯ ಗ್ರಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎ.23ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಹಕಾರದಲ್ಲಿ ನಡೆದ 30,000 ಆಹಾರ ಧಾನ್ಯದ ಕಿಟ್ ವಿತರಿಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು.
ತಬ್ಲಿಘಿ ಜಮಾ ಅತ್ ಕಾರ್ಯಕ್ರಮಕ್ಕೆ ಹೋದ ಜನರಿಗೆ ಕ್ವಾರಂಟೈನ್ ಮಾಡಲಾಗಿದ್ದು ಅವರ ಸಂಪರ್ಕದಲ್ಲಿದ್ದ ಇತರರಿಗೂ ಕ್ವಾರಂಟೈನ್ ಮಾಡಲಾಗಿದೆ ಎಂದರು. ಶಾಸಕ ಜಮೀರ್ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಆರೋಗ್ಯ ಸಚಿವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಕೃಷಿ ಹಾಗೂ ಗ್ರಾಮೀಣ ಭಾಗದ ಇತರ ಕೆಲಸಗಳಿಗೆ ಅನುಕೂಲ ಕಲ್ಪಿಸಲು ಲಾಕ್ ಡೌನ್ ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದ್ದು, ಎಪ್ರಿಲ್ 27ರಂದು ಪ್ರಧಾನಿಗಳು ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದು, ನಂತರವಷ್ಟೇ ಮೇ 3ರ ನಂತರದ ಲಾಕ್ ಡೌನ್ ನಿಯಮಾವಳಿಗಳ ಬಗ್ಗೆ ತೀರ್ಮಾನ ಕೈಗೊಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು. ಶಾಸಕ ಹರೀಶ್ ಪೂಂಜಾ, ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.








