ರಾಜ್ಯದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಎಪ್ರಿಲ್ 23ರ ಮಧ್ಯಾಹ್ನ ಪೂರ್ವ ನಿಗದಿತ ಸರಕಾರಿ ಕಾರ್ಯಕ್ರಮ ಇಲ್ಲದಿದ್ದರೂ ಉಜಿರೆಗೆ ಆಗಮಿಸಿ; ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಏರ್ಪಡಿಸಿದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೃಶ್ಯ ಮಾಧ್ಯಮದ ಮುಂದೆ ಅನಗತ್ಯ ಪೋಸ್ ನೀಡುವ ಸಂದರ್ಭ ವೈಯಕ್ತಿಕ ಅಂತರದ ಅನಿವಾರ್ಯತೆಗೇ ಸವಾಲು ಹಾಕಿ, ಕೊರೋನಾ ಸೋಂಕು ವಿರೋಧಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿದರು.
ಹೇಳಿಕೇಳಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಅಧಿಕೃತ ಸರಕಾರಿ ಕಾರ್ಯಕ್ರಮವಿರಲಿಲ್ಲ. ಆದರೂ ಉಡುಪಿಯಿಂದ ಲಾಕ್ ಡೌನ್ ಸಂದರ್ಭ ರಸ್ತೆ ಮಾರ್ಗವಾಗಿ ಉಜಿರೆಗೆ ಬರಲು ಯಾವ ತುರ್ತು ಕೆಲಸವಿತ್ತು; ಸಚಿವರಾದ ಮಾತ್ರಕ್ಕೇ ಪ್ರಧಾನಿ ನರೇಂದ್ರ ಮೋದಿ ಹೇಳಿದ ನಿಯಮಾವಳಿಗಳು ಯಾವುದೂ ಅನ್ವಯಿಸುವುದಿಲ್ವಾ… ಕೊರೋನಾ ಸೋಂಕು ತಡೆಗೆ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ನೀಡಿದ ಲಾಕ್ ಡೌನ್ ಕರೆಗೆ ರಾಜ್ಯದ ಸಚಿವರಾಗಿ ಇವರು ನೀಡುವ ಗೌರವ ಇದೇನಾ… ಜನಸಾಮಾನ್ಯರು ಅದರಲ್ಲೂ ಬಿಜೆಪಿಯ ಅಂಧ ಭಕ್ತರು ವಾದಿಸಬಹುದು; ‘ಸಚಿವರಾದವರು ಎಲ್ಲಿ ಹೋಗಲೂ ಅಧಿಕಾರವಿದೆ, ಇದನ್ನು ಪ್ರಶ್ನಿಸಲು ಜನಸಾವಾನ್ಯರಿಗೆ ಅಧಿಕಾರವಿಲ್ಲ’ ಎಂದು. ಆದರೆ ಕೊರೋನಾ ಸೋಂಕಿಗೆ ಸಚಿವ ಅಥವಾ ಜನಸಾಮಾನ್ಯ ಎಂಬ ಭೇದವಿಲ್ಲವೆಂಬ ಕಠೋರ ಸತ್ಯ ಇಂತಹ ಅಂಧ ಭಕ್ತರಿಗೆ ಮಾತ್ರವಲ್ಲ; ರಾಜಕೀಯ ಉದ್ಧೇಶಕ್ಕೆ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಚಿವರಿಗೂ ಗೊತ್ತಿಲ್ಲದಿರುವುದು ವಿಪರ್ಯಾಸವೇ ಸರಿ.
ಆಯಿತು ಸಚಿವ ಬೊಮ್ಮಯಿ ಉಜಿರೆ ಬಂದರು. ವೇದಿಕೆಯಲ್ಲಿ ಮಾಸ್ಕ್ ಧರಿಸದ ಅಥವಾ ಸರಿಯಾಗಿ ಧರಿಸದ ಉಳ್ಳವರೊಂದಿಗೆ ಬೆರೆತರು; ಫೊಟೋಗೆ ಪೋಸ್ ನೀಡಿದರು. ತದನಂತರ ಮಾಧ್ಯಮದವರ ಮುಂದೆ ಹೇಳಿಕೆ ನೀಡಲು ಸಜ್ಜಾದರು….ಇಲ್ಲಿಯಂತೂ ಸಚಿವರ ಬೊಮ್ಮಾಯಿ ವೈಯಕ್ತಿಕ ಅಂತರದ ಅ..ಆ…ಇ…ಈ..ಗೊತ್ತಿಲ್ಲದವರಂತೆ ವರ್ತಿಸಿದರು. ಅಂದ ಮೇಲೆ ಕೊರೋನಾ ಸೋಂಕಿನ ವಿರುದ್ಧ ಹೋರಾಟದ ಪ್ರಮುಖ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಕಡ್ಡಾಯ ಮಾಸ್ಕ್ ಧರಿಸುವುದು ಹಾಗೂ ವೈಯಕ್ತಿಕ ಅಂತರ ಕಾಪಾಡುವುದು ಮಾತಿಗೆ ನಮ್ಮ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಯಾವ ಬೆಲೆ ಕೊಟ್ಟಂತಾಯಿತು… ನಮ್ಮ ರಾಜ್ಯ ಸರಕಾರದ ಗೃಹ ಸಚಿವರೇ ಹೀಗಾದರೆ ಇತರ ಸಚಿವರು ಯಾವ ರೀತಿ ಬೇಜವಾಬ್ದಾರಿಯಿಂದ ವರ್ತಿಸಿಯಾರು… ಇವೆಲ್ಲದರ ನಡುವೆ ಲಾಕ್ ಡೌನ್ ಸಂದರ್ಭ ನೀವೆಲ್ಲಿ ಇದ್ದೀರಾ ಅಲ್ಲೇ ಇರಿ, ಅತೀ ಅಗತ್ಯಕ್ಕೆ ಮಾತ್ರ ಹೊರಗೆ ಬನ್ನಿ ಎಂಬ ಪ್ರಧಾನಿ ನರೇಂದ್ರ ಮೋದಿಯ ಕರೆಗೆ ಸವಾಲು ಎಸೆಯುವಂತೆ ರಾಜ್ಯದೆಲ್ಲೆಡೆ ಅನಗತ್ಯ ಸಂಚರಿಸುತ್ತಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಯವರಂತಹ ಸಚಿವರುಗಳು ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರಕಾರಕ್ಕೆ ಇನ್ನಷ್ಟು ಹೊರೆಯಾಗಿದ್ದಾರೆ ಎಂದರೂ ತಪ್ಪಲ್ಲ.








