ಬೆಳ್ತಂಗಡಿ: ಕೋವಿದ್ -19 ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ನಿಂದ ಯಕ್ಷಗಾನ ಮೇಳಗಳ ತಿರುಗಾಟವನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ಸಂಕಷ್ಟದಲ್ಲಿರುವ ತಾಲೂಕಿನ ಯಕ್ಷಗಾನ ಕಲಾವಿದರು ಹಾಗೂ ರಂಗ ಪರಿಚಾಕರಿಗೆ ಶಾಸಕ ಹರೀಶ್ ಪೂಂಜ ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಸಾಂಕೇತಿಕವಾಗಿ ಶ್ರಮಿಕ ನೆರವು ಆಹಾರ ಕಿಟ್ ಗಳನ್ನು ಎಪ್ರಿಲ್ 24ರಂದು ವಿತರಿಸಿದರು.
ಕಿಟ್ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಲಾಕ್ ಡೌನ್ ನಿಂದ ಮೇಳಗಳ ತಿರುಗಾಟವಿಲ್ಲದೇ ಕಲಾವಿದರು ಸಮಸ್ಯೆಯಲ್ಲಿದ್ದಾರೆ. ತಾಲೂಕಿನ ಸುಮಾರು 150ಕ್ಕೂ ಹೆಚ್ಚು ಕಲಾವಿದರಿದ್ದು, ಅವರಿಗೆ ಶ್ರಮಿಕ ನೆರವು ಆಹಾರ ಧಾನ್ಯಗಳ ಕಿಟ್ ಇಂದು ಸಾಂಕೇತಿಕವಾಗಿ ವಿತರಿಸಲಾಗುತ್ತಿದೆ. ಎಲ್ಲರ ಸಹಕಾರದಿಂದ ಕಲಾವಿದರನ್ನು ಗುರುತಿಸಲಾಗಿದ್ದು, ನಾಳೆ( ಶನಿವಾರ) ಕಲಾವಿದರ ಮನೆಗಳಿಗೆ ಕಿಟ್ ಗಳನ್ನು ತಲುಪಿಸಲಾಗುವುದು ಎಂದರು.
ಇದೇ ಸಂದರ್ಭ ಸುಂಕದಕಟ್ಟೆ ಮೇಳದ ಕಲಾವಿದರಿಗಾಗಿ ರೂ. 20000 ಸಾವಿರ ನಗದನ್ನು ಶಾಸಕರು ಹಸ್ತಾಂತರಿಸಿದರು.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ, ಉದ್ಯಮಿಗಳಾದ ಮೋಹನ್ ಕುಮಾರ್, ರಾಘವೇಂದ್ರ ಬೈಪಾಡಿತ್ತಾಯ,
ಸಂಯೋಜಕ ಡಾ.ಎಂ.ಎಂ.ದಯಾಕರ್, ವೆಂಕಟರಮಣ ಹೊಳ್ಳ, ಶಿತಿಕಂಠ ಭಟ್, ಮಹೇಶ್ ಕನ್ಯಾಡಿ, ಮುರಳಿ ಕೃಷ್ಣಾಚಾರ್,
ಸಿದ್ದಾರ್ಥ ರಾಜ್, ಪ್ರಸಾದ್ , ಸುಬ್ರಹ್ಮಣ್ಯ ಭಟ್ ಮೊದಲಾದವರು ಹಾಜರಿದ್ದರು.








