ಉಜಿರೆಯ ದ್ವಿಚಕ್ರ ವಾಹನ ವಿತರಕನೋರ್ವ ಸಾಲದ ಕಂತು ಪಾವತಿಸುವಂತೆ ಆಶಾ ಕಾರ್ಯಕರ್ತೆಗೆ ಇಂದಿನ ಸಂಕಷ್ಟದ ದಿನಗಳಲ್ಲಿ ದಮ್ಕಿ ಹಾಕಿದ ಬಗ್ಗೆ ತಿಳಿದು ಬಂದಿದೆ.
ತಾಲೂಕಿನ ಆಶಾ ಕಾರ್ಯಕರ್ತೆಯೋರ್ವಳು ಉಜಿರೆಯ ದ್ವಿಚಕ್ರ ವಾಹನ ವಿತರಕರಿಂದ ಕೆಲ ತಿಂಗಳ ಹಿಂದೆ ಸ್ಕೂಟಿಯೊಂದನ್ನು ಖರೀದಿಸಿದ್ದರು. ಈ ಸ್ಕೂಟಿ ಖರೀದಿಗೆ ಅದೇ ದ್ವಿಚಕ್ರ ವಾಹನ ವಿತರಕ ಸದ್ರಿ ಆಶಾ ಕಾರ್ಯಕರ್ತೆಗೆ ಖಾಸಗಿ ಫೈನಾನ್ಸಿನಿಂದ ಸಾಲ ಒದಗಿಸಿದ್ದರು ಎನ್ನಲಾಗಿದೆ. ಸಾಲಕ್ಕೆ ಭದ್ರತೆಯಾಗಿ ತಿಂಗಳ ಕಂತಿನ ಮೊಬಲಗಿನ ಚೆಕ್ ಸಹಿತ ಸಾಕಷ್ಟು ಭದ್ರತೆಯನ್ನು ಆಶಾ ಕಾರ್ಯಕರ್ತೆ ಒದಗಿಸಿದ್ದರು. ಇದೀಗ ಕೊರೋನಾ ಸೋಂಕು ಜಾಗೃತಿ ಕಾರ್ಯದಲ್ಲಿ ಹಳ್ಳಿಗಳಲ್ಲಿ ತೊಡಗಿಸಿಕೊಂಡಿರುವ ಈ ಆಶಾ ಕಾರ್ಯಕರ್ತೆ ಕೆಲಸದ ಒತ್ತಡ ಹಾಗೂ ಲಾಕ್ ಡೌನ್ ಸಮಸ್ಯೆಯಿಂದ ಸಕಾಲದಲ್ಲಿ ಸಾಲದ ಮೊತ್ತವನ್ನು ಬ್ಯಾಂಕಿನಲ್ಲಿ ಜಮಾ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಪರಿಣಾಮ ಸಾಲದ ಕಂತಿನ ಹಣದ ಚೆಕ್ ಬೌನ್ಸ್ ಆಗಿತ್ತು.
ಉಜಿರೆಯ ದ್ವಿಚಕ್ರ ವಾಹನ ವಿತರಕನಿಗೆ ಇಷ್ಟು ಸಾಕಾಗಿತ್ತು. ಆಶಾ ಕಾರ್ಯಕರ್ತೆಯನ್ನು ಫೋನ್ ಮೂಲಕ ಸಂಪರ್ಕಿಸಿದ ಈ ದ್ವಿಚಕ್ರ ವಾಹನ ವಿತರಕ, ಸಾಲದ ಕಂತಿನ ಹಣ ಪಾವತಿಸದಿದ್ದರೆ ಸ್ಕೂಟಿಯನ್ನು ಸೀಝ್ (ಮುಟ್ಟುಗೋಲು) ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕೊರೋನಾ ಸೋಂಕಿನ ಭೀತಿಯಿಂದಾಗಿ ದೇಶವೇ ಲಾಕ್ ಡೌನಾಗಿ, ಎಲ್ಲರ ಆರ್ಥಿಕ ಸ್ಥಿತಿಗತಿ ಡೋಲಾಯಮಾನವಾದ ಇಂದಿನ ದಿನಗಳಲ್ಲಿ ಯಾವುದೇ ಬ್ಯಾಂಕ್ ಅಥವಾ ಖಾಸಗಿ ಲೇವಾದೇವಿ ಸಂಸ್ಥೆಯವರ ಎಲ್ಲ ರೀತಿಯ ಸಾಲ ವಸೂಲಾತಿಗಳಗೆ ಕೇಂದ್ರ ಸರಕಾರ ಮೂರು ತಿಂಗಳು ತಡೆ ನೀಡಿರುವಾಗ; ಸಾಲ ವಸೂಲಾತಿಗೆ ಆಶಾ ಕಾರ್ಯಕರ್ತೆಯ ಬೆನ್ನುಬಿದ್ದಿರುವ ಉಜಿರೆಯ ದ್ವಿಚಕ್ರ ವಾಹನ ಡೀಲರಿನ ಬಗ್ಗೆ ತಾಲೂಕಿನ ಬಹುತೇಕ ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿಂಚಿತ್ ಗೌರವಧನ ಪಡೆಯುವ ಆಶಾ ಕಾರ್ಯಕರ್ತೆಯರು ಲಾಕ್ ಡೌನಿನ ಈ ಸಂಕಷ್ಟದ ಸಂದರ್ಭದಲ್ಲಿ ದಿನಬೆಳಗಾದರೆ ಬ್ಯಾಗ್ ಹೆಗಲಿಗೇರಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗೆ ಭೇಟಿ ನೀಡಿ ಎಲ್ಲರ ಆರೋಗ್ಯ ವಿಚಾರಿಸುತ್ತಿದ್ದಾರೆ. ಇಂತಹ ಅಂಗನವಾಡಿ ಕಾರ್ಯಕರ್ತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸೂಚನೆಯನ್ನೂ ಧಿಕ್ಕರಿಸಿ, ಸಾಲ ವಸೂಲಾತಿಗೆ ಬೆದರಿಕೆ ತಂತ್ರ ಅನುಸರಿಸಿದ ಉಜಿರೆಯ ದ್ವಿಚಕ್ರ ವಾಹವ ವಿತರಕನಿಂದ ಆಶಾ ಕಾರ್ಯಕರ್ತೆಗೆ ರಕ್ಷಣೆ ನೀಡಬೇಕಾಗಿದೆ. ಅಂತೆಯೇ ಲಾಕ್ ಡೌನ್ ಅವಧಿ ಮುಗಿದು, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ತಾನು ದ್ವಿಚಕ್ರ ವಾಹನ ಖರೀದಿಗೆ ಪಡೆದ ಸಾಲದ ಹಣವನ್ನು ನಿಗದಿತ ಬಡ್ಡಿ ಸಹಿತ ಪಾವತಿಸುವ ಜವಾಬ್ದಾರಿ ಸದ್ರಿ ಆಶಾ ಕಾರ್ಯಕರ್ತೆಯದ್ದಾಗಿದೆ.








