
ಬೆಳ್ತಂಗಡಿ: ಕೂಲಿ ಕಾರ್ಮಿಕನೋರ್ವನ ದ್ವಿಚಕ್ರ ವಾಹನ ಅಗ್ನಿಗೆ ಆಹುತಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ವೇಣೂರು ಠಾಣೆಯಲ್ಲಿ ತಂದೆ-ಮಗನ ಮೇಲೆ ಪ್ರಕರಣ ದಾಖಲಾಗಿದೆ.
ಎ. 21 ರಂದು ತಾಲೂಕಿನ ಬಡಗಕಾರಂದೂರು ಗ್ರಾಮದ ಕಟ್ಟೂರು ಎಂಬಲ್ಲಿ ಅದೇ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಸಾಜಿ ಸಿ. ಎಂಬುವರು ಸದಾಶಿವ ರಾವ್ ಎಂಬುವರ ರಬ್ಬರ್ ತೋಟದ ಟ್ಯಾಪಿಂಗ್ ಮಾಡುತ್ತಿದ್ದರು. ಈ ಸಂದರ್ಭ ಬೆಳಿಗ್ಗೆ ಸಾಜಿ ಅವರ ಡಿಯೋ ಸ್ಕೂಟರ್ ಬೆಂಕಿಗೆ ಆಹುತಿಯಾಗಿತ್ತು. ಈ ಕೃತ್ಯವೆಸಗಿದವರು ಕಟ್ಟೂರು ಶಂಕರ ಭಟ್ ಹಾಗು ಅವರ ಮಗ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಸಂದರ್ಭ ದೂರುದಾರರು ಯಾಕೆ ಈ ರೀತಿ ಮಾಡುತ್ತೀರಿ ಎಂದು ಕೇಳಿದಾಗ ಆರೋಪಿಯು ಈ ಜಾಗದಲ್ಲಿ ಟ್ಯಾಪಿಂಗ್ ಮಾಡಬಾರದೆಂದು ನಿನಗೆ ಹೇಳಿದ್ದಲ್ಲಾ. ಮುಂದಕ್ಕೆ ನೀನು ಟ್ಯಾಪಿಂಗ್ ಮಾಡಿದರೆ ನಿನ್ನನ್ನೂ ಕೂಡಾ ಇದೇ ರೀತಿ ಸುಟ್ಟು ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಶಂಕರ ಭಟ್ ಹಾಗು ಸದಾಶಿವರಾವ್ ಅವರೊಳಗೆ ಜಾಗದ ಮೈಮನಸ್ಯ ಇದ್ದರೂ ಕೂಲಿಕಾರ್ಮಿಕ ವಾಹನ ಸುಟ್ಟದ್ದು ಅಕ್ಷಮ್ಯ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಸ್ಕೂಟರ್ನಲ್ಲಿದ್ದ ರೂ. 20,000 ನಗದು, ರೇಷನ್, ಆಧಾರ ಕಾಡ್, ಜಾತಿ ಧೃಡಪತ್ರ, ಚುನಾವಣಾ ಗುರುತು ಚೀಟಿ, ಮಗಳ ಜನನ ಪ್ರಮಾಣ ಪತ್ರ, ವಾಹನದ ಎಲ್ಲಾ ದಾಖಲೆಗಳು ನಷ್ಟವಾಗಿವೆ. ಸುಮಾರು 50,000 ಮೌಲ್ಯದ ಸ್ಕೂಟರ್ ಸಂಪೂರ್ಣ ಭಸ್ಮವಾಗಿದೆ. ಇನ್ನು ವೇಣೂರು ಪೋಲಿಸರು ಪ್ರಾಮಾಣಿಕವಾಗಿ ತನಿಖೆ ನಡೆಸಿ ಬಡ ಕೂಲಿ ಕಾರ್ಮಿಕನೋರ್ವನಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.








