ಬೆಳ್ತಂಗಡಿ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಎಪ್ರಿಲ್ 26ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ಕ್ರಾಂತಿಯೋಗಿ ಬಸವಣ್ಣ ಜಯಂತಿ ಆಚರಣೆಯನ್ನು ಸರಳ ರೀತಿಯಲ್ಲಿ ನಡೆಸಲಾಯಿತು. ವೇದಿಕೆಯಲ್ಲಿದ್ದ ತಹಶೀಲ್ದಾರ್ ಸಹಿತ ಆರು ಮಂದಿ ವೈಯಕ್ತಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಹೋರಾಟದ ಮುನ್ನೆಚ್ಚರಿಕೆ ಸಾರಿದರಾದರೂ; ಆರರಲ್ಲಿ ಒಬ್ಬರು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿ,ಕೊರೋನಾ ಸೋಂಕಿನ ವಿರುದ್ಧದ ಜಾಗೃತಿಗೇ ಸವಾಲಾದರು.
ತಹಸೀಲ್ದಾರ್ ಗಣಪತಿ ಶಾಸ್ತ್ರೀ ಅವರು, ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಹನ್ನೆರಡನೇ ಶತಮಾನದಲ್ಲಿ ಕ್ರಾಂತಿಕಾರಿ ಸಾಮಾಜಿಕ ಚಳುವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿರ್ಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು, ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಸುಧಾಕರ್ ಎಂ.ಎಚ್., ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಕೆ.ಇ.ಜಯರಾಮ್, ಉಪ ತಹಸೀಲ್ದಾರ್ ಸಿದ್ದೇ ಗೌಡ, ಕೊಕ್ಕಡ ಕಂದಾಯ ನಿರೀಕ್ಷಕ ಪವಾಡಪ್ಪ ದೊಡಮನಿ, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮಕರಣಿಕರುಗಳು ಉಪಸ್ಥಿತರಿದ್ದರು.








