ಇವರು ತಾಲೂಕಿನ ವೈದ್ಯಾಧಿಕಾರಿಗಳು; ಡಾl ಕಲಾಮಧು ಶೆಟ್ಟಿ. ಎಪ್ರಿಲ್ 27ರಂದು ಬೆಳ್ತಂಗಡಿಯ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಕೊಡಮಾಡಿದ ಪ್ರಯಾಣಭತ್ತೆಯ ಮೊತ್ತವನ್ನು ಸ್ವೀಕರಿಸಿದರು. ಓರ್ವ ವೈದ್ಯನಾಗಿ, ಅದರಲ್ಲೂ ಸರಕಾರಿ ಆಸ್ಪತ್ರೆಯೊಂದರ ವೈದ್ಯ ಹುದ್ದೆಯ ಜೊತೆಗೆ ತಾಲೂಕು ವೈದ್ಯಾಧಿಕಾರಿಯಾಗಿ ರುವ ಈ ಕಲಾಮಧು ಶೆಟ್ಟರಿಗೆ ಮಾಸ್ಕ್ ಇರೋದು ಕುತ್ತಿಗೆಗೆ ನೆಕ್ಲೆಸ್ ನಂತೆ ಅಲಂಕಾರಕ್ಕೆ ಅಲ್ಲ; ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆಗಾಗಿ ಬಾಯಿ ಮತ್ತು ಮೂಗು ಮುಚ್ವಿಕೊಳ್ಳಲು ಎಂಬ ಅರಿವಿರದಿರುವುದು ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಮಾಸ್ಕ್ ಧರಿಸಿದ ರೀತಿಯನ್ನು ಕಂಡಾಗ ಯಾರಿಗೂ ಗೊತ್ತಾಗದಿರದು. ನಾಣ್ಣುಡಿಯೊಂದಿದೆ…ನಾವೆಂದೂ ದುರ್ಜನರಿಗೆ ದೂತರಾಗಬಾರದು. ಕೊರೋನಾ ಸೋಂಕು ತಡೆಗೆ ಮುಂಜಾಗ್ರತೆಯಾಗಿ ಮಾಸ್ಕ್ ಧರಿಸುವುದರ ಜೊತೆಗೆ ವೈಯಕ್ತಿಕ ಅಂತರ ಕಾಪಾಡಬೇಕಾದ ಅನಿವಾರ್ಯತೆಯ ಅರಿವಿದ್ದರೂ, ತಾಲೂಕು ವೈದ್ಯಾಧಿಕಾರಿಯಾಗಿರುವ ಡಾl ಕಲಾಮಧು ಶೆಟ್ಟಿ ವೈಯಕ್ತಿಕ ಅಂತರ ಕಾಪಾಡಿದರೂ ಮಾಸ್ಕನ್ನು ಕುತ್ತಿಗೆಗೆ ನೆಕ್ಲೆಸಿನಂತೆ ಧರಿಸಿ, ಕೊರೋನಾ ವಾರಿಯರ್ಸ್ ರನ್ನು ಅವಮಾನಿಸಿದರು. ಕೊರೋನ ವಾರಿಯರ್ಸ್ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಪ್ರಯಾಣ ಮೊತ್ತ ಹಸ್ತಾಂತರಿಸುವ ಮಾನವೀಯ ಕಾರ್ಯ ಮಾಡುವಾಗ ಎಂ.ಎಲ.ಸಿ. ಹರೀಶ್ ಕುಮಾರ್ ತಮ್ಮ ಆರೋಗ್ಯ ರಕ್ಷಣೆಯ ಜವಾಬ್ದಾರಿ ಮರೆತು, ತನ್ನಲ್ಲಿದ್ದ ಮಾಸ್ಕನ್ನು ಕೊರಳಿಗೆ ಹಾಕಿಕೊಂಡದ್ದು ತಾಲೂಕು ವೈದ್ಯಾಧಿಕಾರಿಗಳ ಪ್ರಭಾವದಿಂದಲೋ ಅಥವಾ ಮರೆವಿನಿಂದಲೋ ತಿಳಿಯುತ್ತಿಲ್ಲ. ಅಂತೂ ಕೊರೋನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಆಶಾ ಕಾರ್ಯಕರ್ತೆಯರಿಗೆ ಸಹಾಯಹಸ್ತ ಚಾಚುವ ಈ ಕಾರ್ಯಕ್ರಮದಲ್ಲೇ ತಾಲೂಕು ವೈದ್ಯಾಧಿಕಾರಿ ಹಾಗೂ ಎಂ.ಎಲ್.ಸಿ. ಮಾಸ್ಕ್ ಧರಿಸದೇ ಭಾಗವಹಿಸಿದ್ದು ಮಾತ್ರ ಜನಸಾಮಾನ್ಯರಿಗೆ ಮಾಸ್ಕ್ ಬಗ್ಗೆ ತಪ್ಪು ಸಂದೇಶ ರವಾನಿಸಿದೆ ಎಂಬುದು ಮಾತ್ರ ಸುಳ್ಳಲ್ಲ.








