ಮೂಡುಬಿದಿರೆ : ಸಂಪೂರ್ಣ ಜಗತ್ತನ್ನು ಆವರಿಸಿರುವ ಕೊರೋನಾ ವೈರಸ್ ನಿಂದ ಜನ ಭೀತಿಯಿಂದಿದ್ದಾರೆ. ಆದರೆ ಕನಿಷ್ಠ ಗೌರವಧನ ಪಡೆಯುವ ಆಶಾ ಕಾರ್ಯಕರ್ತೆಯರು ಊರೆಲ್ಲಾ ಸುತ್ತಾಡಿ ಎಲ್ಲರ ಸೇವೆ ಮಾಡುತ್ತಿರುವುದರಿಂದ ನಮ್ಮೆಲ್ಲರಿಗಿಂತ ಮುಂದಿದ್ದಾರೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನುಡಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಮೂಡುಬಿದಿರೆ ತಾಲೂಕಿನ ಆಶಾ ಕಾರ್ಯಕರ್ತೆಯರು, ನವೋದಯ ಸ್ವ-ಸಹಾಯ ಸಂಘಗಳ ಪ್ರೇರಕರುಗಳು ಮತ್ತು ಸ್ಥಳೀಯ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಅವರು ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ತಲಾ ರೂ. 1000 ಜಮಾ ಮಾಡಲಾಗುವುದು ಎಂದು ಪ್ರಕಟಿಸಿದರು. ಈ ಯುದ್ಧ ಬೇಗನೇ ಮುಗಿಯುವಂತೆ ಕಾಣಿಸುತ್ತಿಲ್ಲ. ಇನ್ನೂ ಕೆಲವು ದಿನಗಳ ಕಾಲ ಇದು ಮುಂದುವರಿಯಲಿದೆ. ಜನರು ತಾಳ್ಮೆಯಿಂದ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ಯುದ್ಧವನ್ನು ಗೆಲ್ಲಬೇಕಾಗಿದೆ ಎಂದು ನುಡಿದ ಅವರು ರಾಜ್ಯ ಅಪೆಕ್ಸ್ ಬ್ಯಾಂಕ್ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ. ಅಪೆಕ್ಸ್ ಬ್ಯಾಂಕಿನಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರೂ. 25ಕೋಟಿ ನೀಡಲಾಗಿದ್ದು, ಅಪೆಕ್ಸ್ ಬ್ಯಾಂಕಿನಿಂದ ಇಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಒಟ್ಟು 205 ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಎಲ್ಲರೂ ಮಾಸ್ಕ್ ಧರಿಸಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಂತಹ ಮಾದರಿ ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಕಾಪಾಡಲು ಇನ್ನೂ ಹೆಚ್ಚಿನ ಒತ್ತು ನೀಡಬಹುದಾಗಿತ್ತು.
ಸ್ಥಳೀಯ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಮಂಗಳೂರು ಎ.ಪಿ.ಎಂ.ಸಿ. ಅಧ್ಯಕ್ಷ ಪ್ರವೀಣ್ ಕುಮಾರ್, ತಹಶೀಲ್ದಾರ್ ಅನಿತಾಲಕ್ಷ್ಮಿ, ಪುರಸಭೆ ಮುಖ್ಯಾಧಿಕಾರಿ ಇಂದು, ನವೋದಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸುನಿಲ್ ಕುಮಾರ್ ಬಜಗೋಳಿ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ। ಶಶಿಕಲಾ, ಡಿ.ಸಿ.ಸಿ. ಬ್ಯಾಂಕ್ ಮೂಡುಬಿದಿರೆ ಶಾಖೆ ವ್ಯವಸ್ಥಾಪಕ ಭಾಸ್ಕರ್, ಮೇಲ್ವಿಚಾರಕ ಸಂಜಯ್ ಜೈನ್, ವಿವಿಧ ಸಹಕಾರಿ ಬ್ಯಾಂಕ್ ಗಳ ಅಧ್ಯಕ್ಷರುಗಳಾದ ಹರಿಪ್ರಸಾದ್ ಶೆಟ್ಟಿ ಪಾಲಡ್ಕ, ಜೋಕಿಂ ಕೊರೆಯಾ ಕಲ್ಲಮುಂಡ್ಕೂರು, ಪದ್ಮಪ್ರಸಾದ್ ಜೈನ್ ಹೊಸಬೆಟ್ಟು ಉಪಸ್ಥಿತರಿದ್ದರು. ಸಾಣೂರು ಮೋಹನದಾಸ ಪ್ರಭು ಕಾರ್ಯಕ್ರಮ ನಿರೂಪಿಸಿದರು.








