

ಬೆಳ್ತಂಗಡಿ ತಾಲೂಕಿನ ನಾಗರಿಕರಿಗೆ ಅದರಲ್ಲೂ ರೈತಾಪಿ ಕೃಷಿಕ ವರ್ಗಕ್ಕೆ ಕಳೆದ ವರ್ಷದ ಮಳೆಗಾಲದ ಪ್ರವಾಹದ ಕಹಿನೆನಪು ಮಾಸದಿರುವಾಗಲೇ ಮತ್ತೊಂದು ಮಳೆಗಾಲ ಅದೇನು ಅನಾಹುತ ಸೃಷ್ಟಿಸೀತು ಎಂಬ ಆತಂಕ ಮನೆ ಮಾಡುತ್ತಿದೆ. ಎಪ್ರಿಲ್ 30ರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅಡಿಕೆ ಮರ ಸಹಿತ ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ಇದು ಮುಂದೆ ಆಗಬಹುದಾದ ಪ್ರಾಕೃತಿಕ ವಿಕೋಪದ ಟೆಸ್ಟ್ ಡೋಸ್ ಆಗಿರಬಹುದು ಎಂದು ಬೆದರಿರುವ ಅನೇಕ ಕೃಷಿಕರು, ಮಳೆಯಿಂದಾಗಬಹುದಾದ ಸಂಭಾವ್ಯ ಅನಾಹುತದಿಂದ ಪಾರಾಗಲು ಸೂಕ್ತ ಮುಂಜಾಗ್ರತಾ ಕ್ರಮಕ್ಕಾಗಿ ಶಾಸಕರತ್ತ ಹಾಗೂ ತಾಲೂಕು ಆಡಳಿತದತ್ತ ನಿರೀಕ್ಷೆಯ ಕಂಗಳಿಂದ ನೋಡುತ್ತಿದ್ದಾರೆ. ಕಳೆದ ಬಾರಿಯ ಪ್ರವಾಹದ ನಷ್ಟದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಮಳೆರಾಯ ಆರ್ಭಟಿಸದಿರಲಿ; ಸೌಮ್ಯವಾಗಿ ವರುಣದೇವ ಕೃಪೆ ತೋರಲಿ ಎಂದು ತಾಲೂಕಿನ ಆಸ್ತಿಕರು ಸರ್ವಶಕ್ತನ ಮೊರೆ ಹೋಗುತ್ತಿದ್ದಾರೆ. ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಅನುಷ್ಢಾನದಲ್ಲಿ ಸಂಪೂರ್ಣ ಬ್ಯುಸಿಯಾಗಿರುವ ತಾಲೂಕು ಆಡಳಿತ; ಇತ್ತ ಸಂಭಾವ್ಯ ಪ್ರಾಕೃತಿಕ ವಿಕೋಪದಿಂದ ರೈತರ ಸಹಿತ ನಾಗರಿಕರನ್ನು-ಆಸ್ತಿಪಾಸ್ತಿಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ನಿಭಾಯಿಸಬೇಕಾಗಿದೆ.
ಮೇಲಂತಬೆಟ್ಟು ಗ್ರಾಮದಲ್ಲಿ ಗಾಳಿ ಮಳೆಗೆ ಜಿ.ಪಂ. ಮಾಜಿ ಸದಸ್ಯ ಶೈಲೇಶ್ ಕುರ್ತೋಡಿ ಅವರ ಹಟ್ಟಿಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಅಡಿಕೆ ಗಿಡಗಳು ಧರಾಶಾಹಿಯಾಗಿದೆ. ಸುತ್ತಮುತ್ತ ಅಡ್ಕದ ಬೈಲು, ಮೂಡಲ, ನಡ್ವಡ್ಕ, ಮಿತ್ತಡ್ಕ, ಕೆಳಗಿನ ಅಡ್ಕ ಸುತ್ತಮುತ್ತ 80 ಕ್ಕೂ ಅಧಿಕ ಅಡಿಕೆ ಗಿಡಗಳು ಗಾಳಿಗೆ ಬುಡಸಮೇತ ಧರೆಗುರುಳಿದೆ..
ಉಜಿರೆ ಪೇಟೆ ಸಮೀಪ ಪಕ್ಕದ ಕಲ್ಲೆ ಎಂಬಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ನಷ್ಟ ಉಂಟಾಗಿದೆ. ಕಲ್ಲೆಯ ಗಣೇಶ್ ನಾಯ್ಕ್ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. ಸ್ವಿಚ್ ಬೋರ್ಡ್ಗಳು, ಉಪಕರಣಗಳು ಹಾನಿಗೀಡಾಗಿವೆ. ಅಜಿತ್ ನಗರದಲ್ಲಿ ನೀಲಯ್ಯ ನಾಯ್ಕ ಅವರ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ನಡ ಗ್ರಾಮದ ನಡಬೈಲು ಶ್ರೀಧರ ಆಚಾರ್ಯ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ತಾಲೂಕಿನ ಮೇಲಂತಬೆಟ್ಟು ಇಳಂತಿಲ, ಕಣಿಯೂರು ಸಮೀಪದ ಮಾವಿನಕಟ್ಟೆ ಪರಿಸರ ಸೇರಿದಂತೆ ಒಟ್ಟು 15 ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಯಾಗಿದೆ. ಪ್ರಕೃತಿ ದೇವತೆ ನೀಡಿದ ಈ ಟೆಸ್ಟ್ ಡೋಸಿನಿಂದ ತಾಲೂಕು ಆಡಳಿತ ಹಾಗೂ ಶಾಸಕರು ಎಚ್ಚೆತ್ತು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತಾಗಲಿ.








