ಮೂಡುಬಿದಿರೆ : ಯುವ ಬಂಟರ ಸಂಘ ಮೂಡುಬಿದಿರೆ ಇದರ ವತಿಯಿಂದ ಲಾಕ್ ಡೌನಿನಿಂದ ಸಂಕಷ್ಟದಲ್ಲಿರುವ ಬಂಟ ಸಮಾಜದ ಕುಟುಂಬಗಳಿಗೆ ತಲಾ 10 ಕೆ.ಜಿ.ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವು ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅವರು ಸಮಾಜದ ಬಾಂಧವರು ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಯುವ ಬಂಟರ ಸಂಘ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸ್ತುತ್ಯರ್ಹವಾಗಿದೆ ಎಂದರಲ್ಲದೆ ಸಂಬಂಧಗಳನ್ನು ಹೇಳಿಕೊಂಡು ಸಮಾಜ ಬಾಂಧವರು ಬೇರೆಯವರ ಮನೆಗೆ ಭೇಟಿ ನೀಡಬೇಡಿ, ಈ ಮಹಾಮಾರಿ ತೊಲಗುವವರೆಗೆ ನೀವೂ ಬೇರೆ ಮನೆಗೆ ಭೇಟಿ ನೀಡಬೇಡಿ. ಇದನ್ನು ಜವಾಬ್ದಾರಿಯುತವಾಗಿ ಸ್ವಯಂ ಕಡ್ಡಾಯ ಮಾಡಿಕೊಳ್ಳುವ ಮೂಲಕ ಕೊರೋನಾ ಕಾಯಿಲೆ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಬೇಕು ಎಂದು ಸಮಾಜ ಬಾಂಧವರಿಗೆ ಕರೆಯಿತ್ತರು.
ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿಯವರು ಮಾತನಾಡಿ ದೇಶದ ಕೆಲವು ಭಾಗಗಳಲ್ಲಿ ಕೊರೋನಾ ಮಹಾಮಾರಿಗೆ ಮಾಧ್ಯಮ ಮಿತ್ರರ ಸಹಿತ ಕೊರೋನಾ ವಾರಿಯರ್ಸ್ ಕೂಡಾ ಬಲಿಯಾಗುತ್ತಿರುವುದು ತೀವ್ರ ಕಳವಳಕಾರಿಯಾಗಿದೆ ಎಂದರು.
ತೋಡಾರು ದಿವಾಕರ ಶೆಟ್ಟಿಯವರು ಮಾತನಾಡಿ ಮಾಧ್ಯಮದ ಮಿತ್ರರೂ ಕೊರೋನಾ ವಾರಿಯರ್ಸ್ ನ ಅಂಗವಾಗಿದ್ದು, ಕೊರೋನಾ ವಾರಿಯರ್ಸ್ ಗೆ ಸರಕಾರ ಘೋಷಿಸಿರುವ ಎಲ್ಲಾ ಸವಲತ್ತುಗಳು ಪತ್ರಕರ್ತರಿಗೂ ದೊರೆಯು ವಂತಾಗಬೇಕು ಎಂದರು.
ಬಂಟ ಸಮಾಜದ ಮುಖಂಡ ಮೇಘನಾಥ ಶೆಟ್ಟಿ ಮಾತನಾಡಿದರು. ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷ ಮಿಜಾರುಗುತ್ತು ಹರಿಪ್ರಸಾದ್ ಶೆಟ್ಟಿ, ಪುರಸಭಾ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ, ಮಾಜಿ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಯುವ ಬಂಟರ ಸಂಘದ ಪದಾಧಿಕಾರಿಗಳಾದ ಸಂತೋಷ್ ಶೆಟ್ಟಿ ಸ್ನೇಹಸ್ಪಂದನ, ಅರುಣ್ ಕುಮಾರ್ ಶೆಟ್ಟಿ, ಮಿಥುನ್ ಶೆಟ್ಟಿ, ಸಂದೀಪ್ ಶೆಟ್ಟಿ ಬೆಳುವಾಯಿ, ರಮೇಶ್ ಶೆಟ್ಟಿ, ಗೌತಮ್ ಶೆಟ್ಟಿ, ಜಯಕುಮಾರ್ ಶೆಟ್ಟಿ, ಸಂದೀಪ್ ಎನ್. ಶೆಟ್ಟಿ ತೋಡಾರು, ಗಣೇಶ್ ಶೆಟ್ಟಿ, ಸುಧೀರ್ ಶೆಟ್ಟಿ, ಸುಜಿತ್ ಶೆಟ್ಟಿ, ರಾಜೇಶ್ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತಾದರೂ ಕಾರ್ಯಕ್ರಮದ ನಿರ್ವಾಹಕರೇ ಅವಸರವಸರದಲ್ಲಿ ಪ್ರಾರಂಭದಲ್ಲೇ ಮಾಸ್ಕ್ ಧರಿಸಲು ಮರೆತಿದ್ದು ಕಂಡುಬಂತು. ವೇದಿಕೆಯಲ್ಲಿದ್ದ ಒಂದಿಬ್ಬರು ಮಾಸ್ಕನ್ನು ನೆಕ್ಲೆಸ್ ಆಗಿಸಿಕೊಂಡದ್ದು ಕಂಡುಬಂತು.








