ಚಾಲಕನ ನಿಯಂತ್ರಣ! ತಪ್ಪಿದ ಕಾರು ರಸ್ತೆಯ ಬಲಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಹಿಂಬದಿಗೆ ಢಿಕ್ಕಿ ಹಸುಳೆ ಸಾವು-ಐದು ಮಂದಿಗೆ ಗಾಯ

Facebook
Twitter
LinkedIn
WhatsApp

ಮೇ 5ರ ರಾತ್ರಿ 11-00ಗಂಟೆಗೆ ಮಂಗಳೂರು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿನ ಬಳಿ ಇಕೋ ಕಾರೊಂದು ರಸ್ತೆಯ ಬಲಬದಿಯಲ್ಲಿ‌ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಹೆತ್ತವರೊಂದಿಗೆ ಪಯಣಿಸುತ್ತಿದ್ದ ಹಸುಳೆ ಮಾಧವಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇತರ 5ಮಂದಿ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಉಜಿರೆ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಕಾರಿನಲ್ಲಿದ್ದ ದೀಕ್ಷಾ, ಚಾಲಕ ಪ್ರಮೋದ್, ಮಮತಾ, ಸ್ವಾತಿ, ಅಶ್ವಿನಿ ಅಪಘಾತದಲ್ಲಿ ಗಂಭೀರ ಗಾಯಗೊಂಡವರಾಗಿದ್ದು, ಇವರ ಪೈಕಿ ಪ್ರಮೋದ್, ಅಶ್ವಿನಿ ಹಾಗೂ ಹಸುಳೆ ಮಾಧವಿಯನ್ನು ಚಿಕಿತ್ಸೆಗಾಗಿ ವಾಹನವೊಂದರಲ್ಲಿ ಮಂಗಳೂರಿಗೆ ಸಾಗಿಸಲಾಗಿದ್ದು, ಇವರುಗಳ ಪೈಕಿ ಹಸುಳೆ ಮಾಧವಿ ದಾರಿ ಮಧ್ಯೆ ವಾಹನದಲ್ಲಿ ಸಾವನ್ನಪ್ಪಿದ್ದು; ಉಳಿದವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಮಮತಾ ಹಾಗೂ ಸ್ವಾತಿ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ 11-00ಗಂಟೆಗೆ ಕಾರಿನಲ್ಲಿ ಈ ನಾಲ್ವರು ಹಸುಳೆಯೊಂದಿಗೆ ಹೋದದ್ದಾದರೂ ಎಲ್ಲಿಗೆ….ಲಾಕ್ ಡೌನ್ ನಿಯಮವಿರುವಾಗ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧವಿರುವಾಗ ಇವರಿಗೆ ಕಾರಿನಲ್ಲಿ ಹೋಗಲು, ಅದೂ ನಿಯಮಬಾಹಿರವಾಗಿ 5ಮಂದಿ‌ ಪಯಣಿಸಲು ಅನುಮತಿ ಇತ್ತವರು ಯಾರು…. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಗಸ್ತು ತಿರುಗುವ, ವಾಹನ ತಪಾಸಣೆ ನಡೆಸುವ ಪೊಲೀಸರ ಕಣ್ಣಿಗೆ ಈ ವಾಹನ ಬಿದ್ದಿರಲಿಲ್ಲವಾ… ಹೇಗೆ ಹಾಗೂ ಎಲ್ಲಿಂದ ಪೊಲೀಸರ ಕಣ್ತಪ್ಪಿಸಿ ಬಂದರಿವರು… ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆಯಲು ಹೇಗೆ ಸಾಧ್ಯ…ಇವೆಲ್ಲವನ್ನೂ ತನಿಖೆ ನಡೆಸುವ ಜವಾಬ್ದಾರಿ‌ ಪೊಲೀಸರದ್ದು. ಇದರೊಂದಿಗೆ ನಿಯಮಬಾಹಿರವಾಗಿ-ಕಾನೂನಿಗೆ ವಿರುದ್ಧವಾಗಿ ರಾತ್ರಿ ಹೊತ್ತು ಹೆದ್ದಾರಿಯ ಬಳಿ ಟಿಪ್ಪರ್ ಲಾರಿ ನಿಲ್ಲಿಸಿದ ಲಾರಿ ಚಾಲಕನ ವಿರುದ್ಧವೂ ಕಾನೂನು ಕ್ರಮವಾಗಬೇಕು ಎಂಬುದು ನಾಗರಿಕರ ಆಗ್ರಹ.

Latest News

Related Posts