ಬಿಗ್ ಬ್ರೇಕಿಂಗ್ ನ್ಯೂಸ್ ಕೊರೋನಾ ವಾರಿಯರ್ಸ್ ಮೇಲೆ ಶಾಸಕರ ದರ್ಪ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಏರಿ ಹೋದ ಮೂಡುಬಿದಿರೆಯ ಶಾಸಕರು

Facebook
Twitter
LinkedIn
WhatsApp

ಮೂಡುಬಿದಿರೆ : ದೇಶದಾದ್ಯಂತ ನಿಸ್ವಾರ್ಥ ಸೇವೆಗೈಯುತ್ತಿರು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊರೋನಾ ವಾರಿಯರ್ಸ್ ಎಂದು ಘೋಷಿಸಿದ್ದು, ಇವರ ಸೇವೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಆದೇಶದಂತೆ ಚಪ್ಪಾಳೆ ತಟ್ಟಿ, ಗಂಟೆ ಮೊಳಗಿಸಿ, ದೀಪ ಮೊಂಬತ್ತಿ ಬೆಳಗಿಸಿ, ಸೈನಿಕರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಿ ಅಭಿನಂದಿಸುವ ಕಾರ್ಯ ದೇಶದಾದ್ಯಂತ ನಡೆದಿದೆ.
ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ನಡೆದಿರುವ ಈ ಮಾನವೀಯ ಪ್ರಕ್ರಿಯೆಯನ್ನು ನಮ್ಮ ಜನಪ್ರತಿನಿಧಿಗಳೇ ಅರ್ಥೈಸಿಕೊಳ್ಳದಿದ್ದರೆ ಪ್ರಮಾದಗಳು ಮತ್ತೆ ಮತ್ತೆ ನಡೆಯುವ ಸಾಧ್ಯತೆಗಳೆ ಹೆಚ್ಚು. ಕಿವಿ ಊದುವವರ ಜಾಲಕ್ಕೆ ಬಿದ್ದ ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಠಾತ್ ಧಾಳಿ ನಡೆಸಿ ಅಲ್ಲಿನ ವೈದ್ಯಾಧಿಕಾರಿ ಡಾ। ಶಶಿಕಲಾ ಮತ್ತು ಸಿಬ್ಬಂದಿಗಳ ಮೇಲೆರಗಿದ ಪ್ರಸಂಗ ಮೇ 6ರಂದು ನಡೆದಿದೆ. ಕೊರೋನಾ ವಾರಿಯರ್ಸ್ ರೊಂದಿಗೆ ಶಾಸಕರು ನಡೆದುಕೊಂಡ ರೀತಿಗೆ ಸಾರ್ವಜನಿಕರಿಂದ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ವಾರದ ಹಿಂದೆ ಇರುವೈಲು ಪರಿಸರದ ಮಹಿಳೆಯೊಬ್ಬರು ಹೆರಿಗೆಗಾಗಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಮಿಕೋನಿಯಂ ಸ್ಟೈನ್ ಇರುವುದನ್ನು ಪತ್ತೆ ಹಚ್ಚಿ, ಮೂಡುಬಿದಿರೆ ಆಸ್ಪತ್ರೆಯಲ್ಲಿ ಇಂತಹ ಸಮಸ್ಯೆಯಿಂದ ಹುಟ್ಟುವ ಶಿಶುಗಳನ್ನು ಸಂರಕ್ಷಿಸಲು ಅಗತ್ಯವಿರುವ ಸೌಲಭ್ಯಗಳೇ ಇಲ್ಲದ ಕಾರಣ ಅವರನ್ನು ಮಂಗಳೂರಿನ ಜಿಲ್ಲಾಸ್ಪತ್ರೆಯ ಲೇಡಿಗೋಶನ್ ಗೆ ದಾಖಲಿಸುವಂತೆ ಸೂಚಿಸಿ ಸ್ವಯಂ ತಾವೇ ಮಹಿಳೆಯನ್ನು ಕರೆದೊಯ್ಯಲು ೧೦೮ಗೆ ಕರೆಯನ್ನೂ ಮಾಡಿದ್ದರೆಂದು ಹೇಳಲಾಗುತ್ತಿದೆ.
ಕೊರೋನಾ ಅಟ್ಟಹಾಸದಿಂದಾಗಿ ೧೦೮ ತುರ್ತು ಸೇವಾ ವಾಹನಗಳು ಹೆಚ್ಚೆಚ್ಚು ಬಳಕೆಯಾಗುತ್ತಿರುವುದರಿಂದ ೧೦೮ ವಾಹನ ಮೂಡುಬಿದಿರೆ ತಲುಪಲು ವಿಳಂಬವಾಗಿತ್ತು. ಈ ನಡುವೆ ಮಹಿಳೆಗೆ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಹೆರಿಗೆ ಆಗಿ ಹೋಯಿತು. ನವಜಾತ ಶಿಶುವಿನ ಸಂರಕ್ಷಣೆಗೆ ಆಸ್ಪತ್ರೆಯಲ್ಲಿ ಇರುವ ಸವಲತ್ತುಗಳನ್ನು ಬಳಸಿ, ಅಗತ್ಯವಿರುವ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಆದರೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಈ ಸೇವೆಯನ್ನು ಆ ಕ್ಷಣಕ್ಕೆ ಮರೆತ ಬಾಣಂತಿ ಮಹಿಳೆ ತಮ್ಮನ್ನು ಆಸ್ಪತ್ರೆಯಲ್ಲಿ ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ ಎಂಬ ಅರ್ಥ ಬರುವ ರೀತಿ ವೀಡಿಯೋ ಕ್ಲಿಪ್ಪಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ಹಿಂದೆ ಕೂಡಾ ಮೂಡುಬಿದಿರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಸಂದರ್ಭದಲ್ಲಿ ಇದೇ ಮಹಿಳೆ ಇದೇ ರೀತಿ ಜನಪ್ರತಿನಿಧಿಗಳಲ್ಲಿ ದೂರಿಕೊಂಡಿದ್ದರು. ಮಾತ್ರವಲ್ಲ; ಮಂಗಳೂರು ಜಿಲ್ಲಾಸ್ಪತ್ರೆಯ ಲೇಡಿಗೋಶನ್ ನಲ್ಲಿ ಈ ಹಿಂದೆ ದಾಖಲಾಗಿದ್ದಾಗಲೂ ಅನಗತ್ಯ ದೂರನ್ನು ನೀಡಿದ್ದರೆಂದೂ ಹೇಳಲಾಗುತ್ತಿದೆ. ತೀರಾ ಅಸಂತೃಪ್ತಿಯ ಚಾಳಿಯನ್ನು ಹೊಂದಿರುವ ಈ ಮಹಿಳೆಯ ಹಿಂದಿನ ಮರ್ಮವನ್ನು ಗುರುತಿಸಿಕೊಳ್ಳಲಾಗದ ಶಾಸಕರು ಪೂರ್ವಾಪರ ವಿವೇಚಿಸದೇ ಏಕಾಯೇಕಿ ಆಸ್ಪತ್ರೆಗೆ ನುಗ್ಗಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿರುವುದು ಎಷ್ಟು ಸರಿ ಎಂದು ಮೂಡುಬಿದಿರೆಯ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುವಂತಾಗಿದೆ.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ। ಶಶಿಕಲಾ ಅವರು ನಿಸ್ವಾರ್ಥ ಭಾವದಿಂದ ಸೇವೆ ಮಾಡುವ ವೈದ್ಯಾಧಿಕಾರಿ ಎಂಬ ಒಳ್ಳೆಯ ಹೆಸರಿದೆ. ಇಲ್ಲಿನ ಸಿಬ್ಬಂದಿಗಳು ಉತ್ತಮ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಹಾಗೆಂದು ಇವರಿಂದ ಪ್ರಮಾದಗಳೇ ನಡೆಯುವುದಿಲ್ಲ ಎಂದು ನಾವು ಸಮರ್ಥಿಸಲು ಪ್ರಯತ್ನಿಸುತ್ತಿಲ್ಲ. ತಪ್ಪುಗಳು ಎಲ್ಲರಿಂದಲೂ ಆಗುತ್ತಲೇ ಇರುತ್ತದೆ. ಮಹಾಮಾರಿ ಕೊರೋನಾದ ವಿರುದ್ಧ ಸೆಣಸಲು ವೈದ್ಯಕೀಯ ಸಿಬ್ಬಂದಿಗಳು ಮನೆ, ಪತಿ, ಪತ್ನಿ, ಮಕ್ಕಳು ಇಂತಹ ತೀರಾ ನಿಕಟ ಸಂಬಂಧಗಳನ್ನೂ ಬದಿಗಿಟ್ಟು ಟೊಂಕಕಟ್ಟಿ ನಿಂತು ಅಹರ್ನಿಶಿ ಶ್ರಮಿಸುತ್ತಿರುವುದನ್ನು ನಾವು ದೃಶ್ಯ ಮಾಧ್ಯಮಗಳಲ್ಲಿ ದಿನನಿತ್ಯ ಕಾಣುತ್ತಿದ್ದೇವೆ. ಒಂದು ವೇಳೆ ಆಸ್ಪತ್ರೆ ಸಿಬ್ಬಂದಿಗಳಿಂದಲೇ ತಪ್ಪು ನಡೆದಿದ್ದರೂ ಅದನ್ನು ಪ್ರಶ್ನಿಸಲು ಇದು ಸರಿಯಾದ ರೀತಿಯೇ, ಶಾಸಕರು ಇಲಾಖಾ ತನಿಖೆ ನಡೆಸಬಹುದ್ದಿತ್ತಲ್ವಾ… ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಇದ್ಯಾವುದರ ಪರಿವೆಯಿಲ್ಲದ ಶಾಸಕರು ಯಾವುದೋ ಒತ್ತಾಸೆಗೆ ಕಟ್ಟುಬಿದ್ದು ಮಹಾ ಸಂಕಷ್ಟದ ಈ ದಿನಗಳಲ್ಲೇ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಎಗರಾಡುವ ಮನಸ್ಥಿತಿಯನ್ನು ಪ್ರದರ್ಶಿಸಿದ್ದು ಮತ್ತು ತಮ್ಮ ಈ ಸಾಹಸವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟದ್ದು ಹಲವು ಪ್ರಶ್ನೆಗಳನ್ನು ಎಬ್ಬಿಸುವಂತೆ ಮಾಡಿದೆ. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಸಲಹಾ ಸಮಿತಿ ಸದಸ್ಯರಿಗೂ ಈ ಧಾಳಿಯ ಸುಳಿವು ಸಿಗದಿರುವುದು ಅಚ್ಚರಿ ಮೂಡಿಸಿದೆ. ಈ ಮಹಿಳೆಯ ಹೆರಿಗೆ ನಡೆದು ಒಂದು ವಾರದ ನಂತರ ಈ ರೀತಿ ಧಾಳಿ ಮಾಡುವ ಅಗತ್ಯವಿತ್ತೇ ಎಂದು ಪಕ್ಷಬೇಧ ಮರೆತು ಎಲ್ಲರೂ ಪ್ರಶ್ನಿಸುವಂತಾಗಿದೆ.

Latest News

Related Posts