ಕೊರೋನಾ ಸೋಂಕು ಹರಡದಂತೆ ಎಲ್ಲ ಸೂಕ್ತ ಮುಂಜಾಗ್ರತೆ ವಹಿಸಿ, ಜನತೆ ಲಾಕ್ ಡೌನಿನಿಂದ ಹೊರ ಬಂದು ಮುಕ್ತವಾಗಿ ಜೀವನ ನಡೆಸಲಿ ಎಂಬ ಉದ್ಧೇಶದಿಂದ ಸರಕಾರ ಲಾಕ್ ಡೌನಿನ ನಿಯಮಗಳನ್ನು ಸಾಕಷ್ಟು ಸಡಿಲಿಕೆ ಮಾಡಿದೆ. ಆದರೆ ಸರಕಾರ ಮಾಡಿದ ಲಾಕ್ ಡೌನ್ ನಿಯಮಗಳ ಸಡಿಲಿಕೆಯನ್ನು ಉಪಯೋಗಕ್ಕಿಂತ ದುರುಪಯೋಗಪಡಿಸಿಕೊಳ್ಳುತ್ತಿರುವ ಬಹುತೇಕ ಮಂದಿ ದಿನಬೆಳಗಾದರೆ ಬೀದಿಗಿಳಿಯುತ್ತಿದ್ದಾರೆ, ಅನಗತ್ಯ ತಿರುಗುತ್ತಿದ್ದಾರೆ. ಮಾಸ್ಕ್ ಧರಿಸದ-ಧರಿಸಿದರೂ ಸರಿಯಾಗಿ ಧರಿಸದ ವೈಯಕ್ತಿಕ ಅಂತರ ಸಂಪೂರ್ಣವಾಗಿ ಮರೆತ ಬಹುತೇಕ ಮಂದಿಗೆ ಕೊರೋನಾ ಸೋಂಕು ಹರಡಬಹುದೆಂಬ ಭಯವೇ ಇದ್ದಂತಿಲ್ಲ. ಇಂತಹ ಭಯರಹಿತ ಕಾನೂನು ಮತ್ತು ಲಾಕ್ ಡೌನ್ ನಿಯಮ ಉಲ್ಲಂಘಿಸುವವರಿಗೆ ಕಾನೂನಿನ ಎಚ್ಚರಿಕೆ ನೀಡಬೇಕಾದ ಪೊಲೀಸರೂ ಸುಮ್ಮನಿದ್ದಾರೆ. ಪೊಲೀಸರನ್ನು ಕಾಣದ ಪ್ರಭಾವಿ ಶಕ್ತಿಗಳು ಕೆಲಸ ಮಾಡದಂತೆ ಕಟ್ಟಿ ಹಾಕಿದೆ ಎಂಬ ವದಂತಿಯೂ ಇದೆ.
ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಸರಕಾರ ನಿರ್ಬಂಧ ವಿಧಿಸಿದ ಸಿಗರೇಟು, ಗುಟ್ಕಾ ಸಹಿತ ತಂಬಾಕು ಉತ್ಪನ್ನಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಇನ್ನು ಸೆಲೂನ್ ಬಂದ್ ಆದರೂ ಸಾಕಷ್ಟು ಕಡೆ ಮನೆ, ಹಟ್ಟಿ, ಔಟ್ ಹೌಸ್ ಗಳಲ್ಲಿ ಕ್ಷೌರ ಕಾರ್ಯ ನಡೆಯುತ್ತಲೇ ಇದೆ. ದೊಡ್ಡ ಸೆಲೂನ್ ಗಳು ಸರಕಾರಿ ಅಧಿಕಾರಿಗಳ ಕೃಪಾಶ್ರಯದಲ್ಲೇ ನಡೆಯುತ್ತಿದೆ. ಬಹುತೇಕ ಹೊಟೇಲ್ ಹಾಗೂ ಕ್ಯಾಂಟೀನುಗಳಲ್ಲಿ ಪಾರ್ಸೆಲ್ ಮಾತ್ರ ಎಂಬ ನಿಯಮವಿದ್ದರೂ; ಪಾರ್ಸೆಲ್ ಮತ್ತು ಸರ್ವಿಸಿನ ಕಣ್ಣಾಮುಚ್ಚಾಲೆ ನಡೆಯುತ್ತಲೇ ಇದೆ. ಲಾಕ್ ಡೌನ್ ನಿಯಮಗಳ ಉಲ್ಲಂಘನೆ ಸರಕಾರಿ ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುತ್ತಿದ್ದರೂ, ಅಧಿಕಾರಿಗಳೆಲ್ಲರೂ ಏನೂ ಮಾಡಲಾಗದ ಹತಾಶ ಸ್ಥಿತಿಗೆ ತಲುಪಿದಂತಿರುವುದು ಯಾರ ಒತ್ತಡದಿಂದ ಎಂಬ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.








