ಉತ್ತರಭಾರತ ನಿವಾಸಿಗಳಿದ್ದ ಎರಡು ಲಾರಿಗಳಿಗೆ ಗುಂಡ್ಯ ಚೆಕ್‍ಪೋಸ್ಟ್ ನಲ್ಲಿ ಪೊಲೀಸರ ತಡೆ, ಊರಿಗೆ ಕಳುಹಿಸಿಕೊಡುವಂತೆ ಪಟ್ಟು; ಎ.ಸಿ.ಯವರ ಮಾತುಕತೆ -ಮಂಗಳೂರಿಗೆ ಶಿಫ್ಟ್

Facebook
Twitter
LinkedIn
WhatsApp

ಮಂಗಳೂರಿನಿಂದ ಉತ್ತರಭಾರತ ಮೂಲದ 120 ಮಂದಿ ಕಾರ್ಮಿಕರನ್ನು ತುಂಬಿಕೊಂಡು ಬೆಂಗಳೂರು ಮಾರ್ಗವಾಗಿ ಉತ್ತರ ಭಾರತಕ್ಕೆ ಹೊರಟಿದ್ದ ಹರಿಯಾಣ ನೋಂದಾವಣೆಯ ಎರಡು ಲಾರಿಗಳಿಗೆ ಗುಂಡ್ಯ ಚೆಕ್‍ಪೋಸ್ಟ್ ನಲ್ಲಿ ಪೊಲೀಸರು ತಡೆಯೊಡ್ಡಿರುವ ಘಟನೆ ಮೇ 8ರಂದು ಮುಂಜಾನೆ ನಡೆದಿದೆ. ಈ ಮಧ್ಯೆ ಕಾರ್ಮಿಕರು ಊರಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದರಾದರೂ ಎ.ಸಿ.ಯವರ ಮನವೊಲಿಕೆ ಬಳಿಕ ಎಲ್ಲರನ್ನೂ ಮೂರು ಕೆಎಸ್‍ಆರ್‍ಟಿಸಿ ಬಸ್ಸಿನ ಮೂಲಕ ಮತ್ತೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಕಾರ್ಮಿಕರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ಸುಮಾರು 120 ಮಂದಿ ಕಾರ್ಮಿಕರನ್ನು ಹರಿಯಾಣ ರಾಜ್ಯದ ನೋಂದಾವಣೆಯ ಎರಡು ಲಾರಿಗಳಲ್ಲಿ ತುಂಬಿಸಿಕೊಂಡು ಕರೆತರಲಾಗುತ್ತಿತ್ತು. ಎರಡೂ ಲಾರಿಗಳಿಗೆ ಮೇಲ್ಭಾಗದಲ್ಲಿ ಟರ್ಪಾಲ್ ಹೊದಿಸಲಾಗಿದ್ದು ಅಗತ್ಯ ವಸ್ತುಗಳ ಸಾಗಾಟದ ಸ್ಟಿಕ್ಕರ್ ಸಹ ಅಂಟಿಸಲಾಗಿತ್ತು. ಮೇ 8ರಂದು ಬೆಳಿಗ್ಗೆ 3 ಗಂಟೆ ವೇಳೆಗೆ ಗುಂಡ್ಯ ಚೆಕ್‍ಪೋಸ್ಟ್ ಆಗಮಿಸಿದ ಲಾರಿಗಳನ್ನು ಪೊಲೀಸರು ತಪಾಸಣೆ ನಡೆಸಿದ ವೇಳೆ ಜನರನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಲಾರಿಗಳ ಸಂಚಾರಕ್ಕೆ ತಡೆಯೊಡ್ಡಿದ ಪೊಲೀಸರು ಘಟನೆ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು. ಬಳಿಕ ಬೆಳಿಗ್ಗೆ 8 ಗಂಟೆಯ ವೇಳೆಗೆ 120 ಕಾರ್ಮಿಕರನ್ನು ಗುಂಡ್ಯ ಪಿಲಿಕಜೆ ಶಾಲೆಗೆ ಕರೆದೊಯ್ಯಲಾಯಿತು.
ಸ್ಥಳೀಯರ ಆಕ್ಷೇಪ:
ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೇ 120ಮಂದಿ ಕಾರ್ಮಿಕರನ್ನು ಶಾಲೆಯ ಆವರಣಕ್ಕೆ ಕರೆತಂದಿರುವುದಕ್ಕೆ ಸ್ಥಳೀಯರಿಂದ ಆಕ್ಷೇಪವೂ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಶಾಲೆಯ ಮುಂಭಾಗದಲ್ಲಿರುವ ದೈವಸ್ಥಾನಕ್ಕೆ ಸಂಬಂಧಿಸಿದ ಮೈದಾನಕ್ಕೆ ಕಾರ್ಮಿಕರೆಲ್ಲರನ್ನೂ ಕರೆದೊಯ್ದು ಅವರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.
ಊರಿಗೆ ಕಳುಹಿಸಲು ಪಟ್ಟು:
ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್‍ರವರು ಆಗಮಿಸಿದರು. ಈ ವೇಳೆ ಮಾತನಾಡಿದ ಉತ್ತರ ಭಾರತ ಮೂಲದ ಕಾರ್ಮಿಕರು, ಮಂಗಳೂರಿಗೆ ಬಟ್ಟೆ ವ್ಯಾಪಾರಕ್ಕೆಂದು ನಾವು ಬಂದಿದ್ದೇವೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದೂವರೇ ತಿಂಗಳಿನಿಂದ ಕೆಲಸವೂ ಇಲ್ಲದೇ ಹಣವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ನಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದರು. ಆದರೆ ಇದಕ್ಕೆ ಒಪ್ಪದ ಸಹಾಯಕ ಕಮೀಷನರ್‍ರವರು, ನೀವು ಹೊರ ರಾಜ್ಯಕ್ಕೆ ಪ್ರಯಾಣಿಸಲು ಇಲ್ಲಿನ ಜಿಲ್ಲಾಧಿಕಾರಿಗಳಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು. ನಂತರ ನಿಮ್ಮ ಊರಿನ ಜಿಲ್ಲಾಧಿಕಾರಿಗಳಿಂದಲೂ ಅನುಮತಿ ಸಿಗಬೇಕು. ಕೊರೋನಾ ಹರಡದಂತೆ ಎಲ್ಲಾ ರಾಜ್ಯಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳಿರುವುದರಿಂದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಅನುಮತಿ ಪತ್ರ ಇಲ್ಲದೇ ಹೋಗುವಂತಿಲ್ಲ ಎಂದು ಹೇಳಿದರು. ಆದರೂ ಕಾರ್ಮಿಕರೂ ಇಲ್ಲಿಂದ ಕಳುಹಿಸಿಕೊಡುವಂತೆ ಮನವಿ ಮಾಡುತ್ತಲೇ ಇದ್ದರು.
ಮತ್ತೆ ಮಂಗಳೂರಿಗೆ ಶಿಫ್ಟ್:
ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡ ಬಳಿಕ ನಿಮ್ಮೂರಿಗೆ ಕಳುಹಿಸಿಕೊಡಲಾಗುವುದು. ಅಲ್ಲಿಯ ತನಕ ಮಂಗಳೂರಿನಲ್ಲಿ ತಂಗಲು ಹಾಗೂ ಊಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಾರ್ಮಿಕರಿಗೆ ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್‍ರವರು ಭರವಸೆ ನೀಡಿದರು. ನಂತರ ಕಾರ್ಮಿಕರೆಲ್ಲರನ್ನೂ ಮೂರು ಕೆಎಸ್‍ಆರ್‍ಟಿಸಿ ಬಸ್ಸಿನ ಮೂಲಕ ಮತ್ತೆ ಮಂಗಳೂರಿಗೆ ಕಳುಹಿಸಲಾಗಿದೆ. ಯಾವುದೇ ಅನುಮತಿ ಇಲ್ಲದೇ ಕಾರ್ಮಿಕರನ್ನು ತುಂಬಿಸಿಕೊಂಡು ಸಾಗಾಟ ಮಾಡಿದ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆಯೂ ಸಹಾಯಕ ಆಯುಕ್ತರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಡಿವೈಎಸ್‍ಪಿ ದಿನಕರ ಶೆಟ್ಟಿ, ಉಪ್ಪಿನಂಗಡಿ ಎಸ್.ಐ.ಈರಯ್ಯ, ಕಡಬ ತಹಶೀಲ್ದಾರ್ ಜಾನ್‍ಪ್ರಕಾಶ್, ಕಂದಾಯ ನಿರೀಕ್ಷಕ ಅವಿನ್, ಶಿರಾಡಿ ಗ್ರಾಮಕರಣಿಕ ಸಂತೋಷ್, ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ್, ಕೊಂಬಾರು ಗ್ರಾ.ಪಂ.ಪಿಡಿಒ ರಾಘವೇಂದ್ರ ಗೌಡ, ಸದಸ್ಯ ಪುರುಷೋತ್ತಮ ಗೌಡ, ಸಿಬ್ಬಂದಿಗಳಾದ ಜನಾರ್ದನ, ಅಶ್ವತ್ಥ್, ಆಶಾ ಕಾರ್ಯಕರ್ತೆ ಲಲಿತಾ ಮತ್ತಿತರರು ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಹಕರಿಸಿದರು.

Latest News

Related Posts