ಕಾನೂನು ಕ್ರಮ ಜರಗಿಸದಿದ್ದರೆ ಹೋರಾಟದ ಎಚ್ಚರಿಕೆ.
ಮುಂಡಾಜೆ ಪಂಚಾಯತ್ ವ್ಯಾಪ್ತಿಯ ಮೃತ್ಯುಂಜಯ ನದಿ ಹಳ್ಳದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಗಣಿ ಇಲಾಖೆಗೆ ಈ ಬಗ್ಗೆ ಮಾಹಿತಿ ಇದ್ದರೂ ಅಕ್ರಮಿಗಳ ವಿರುದ್ಧ ಕಾನೂನು ಕ್ರಮ ಜರಗಿಸದೇ ಅವರ ರಕ್ಷಣೆಗೆ ನಿಂತಿದೆ. 15 ದಿನಗಳೊಳಗೆ ಈ ಅಕ್ರಮ ಮರಳುಗಾರಿಕೆ ತಡೆಯದೇ ಇದ್ದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಅವರು ಮೇ 8ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಿಗೆ ಈ ಅಕ್ರಮ ಮರಳು ದಂದೆ ತಡೆಯುವಂತೆ ಮೌಖಿಕವಾಗಿ ಮನವಿ ಮಾಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿ, ಮುಂಡಾಜೆ ವ್ಯಾಪ್ತಿಯಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೆ ಹಿಟಾಚಿಯಂತ್ರ ಬಳಸಿ, ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಮರಳು ಸಾಗಿಸುವ ಲಾರಿಗಳ ಸಂಚಾರದಿಂದ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ನಾಶವಾಗುತ್ತಿದ್ದೆ. ಈ ಅಕ್ರಮ ಮರಳು ಗಣಿಗಾರಿಕೆ ಅಡ್ಡಗೆ ನಿನ್ನೆ ಅಂದರೆ ಮೇ 7ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮರಳು ಹಾಗೂ ಲಾರಿ ವಶ ಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇದನ್ನೂ ಸಂಬಂಧಿತ ಇಲಾಖಾಧಿಕಾರಿಗಳು ಸ್ಪಷ್ಟಪಡಿಸಬೇಕು. ತಾಲೂಕಿನ ಇತರ ಕಡೆಗಳಲ್ಲೂ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.ಇದರ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಯಾವುದೇ ಪರವಾನಿಗೆ ಹೊಂದದೆ ಅಕ್ರಮ ಮರುಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆ ಕ್ರಮ ವಹಿಸದಿರುವುದರಿಂದ ಸರಕಾರಿ ಇಲಾಖೆಗಳು ನಂಬಿಕೆಗೆ ಅನರ್ಹವಾಗಿದೆ. ಇದೊಂದು ಬಳ್ಳಾರಿ ಮಾದರಿ ದಂದೆಯಾಗಿದ್ದು, ಶೀಘ್ರ ಕ್ರಮವಹಿಸಿ ಅಕ್ರಮ ಮರಳುಗಾರಿಕೆ ತಡೆಯದೇ ಇದ್ದಲ್ಲಿ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ.ಗೌಡ ಮಾತನಾಡಿ, ಕಳೆದ ವರ್ಷ ಸುರಿದ ಭೀಕರ ಮಳೆಗೆ ಉಂಟಾದ ನೆರೆಯಿಂದ ತೋಟದಲ್ಲಿ ತುಂಬಿದ ಮರಳು ತೆಗೆಯಲು ಅವಕಾಶವಿದೆ. ಅದನ್ನೇ ದುರ್ಬಳಕೆ ಮಾಡಿ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸ್ಥಳೀಯರಿಗೆ ಅವಕಾಶ ನೀಡದೇ; ತಾಲೂಕಿನ ಪ್ರಭಾವಿಗಳನ್ನು ಬಳಸಿ, ಕೆಲ ವ್ಯಕ್ತಿಗಳು ಈ ಅಕ್ರಮ ಮರಳು ದಂದೆ ನಡೆಸುತ್ತಿದ್ದಾರೆ. ಈ ಅವ್ಯವಹಾರದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.







