ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಳ ಮತ್ತು ಪಾರೆಂಕಿ ಗ್ರಾಮಗಳಿಗೆ ಹೊರ ರಾಜ್ಯಗಳಿಂದ ಬರುವ ಊರ ಬಂಧುಗಳನ್ನು 14ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಿಸಲು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಈ ಒಳ ಕ್ರೀಡಾಂಗಣದಲ್ಲಿ ಎರಡು ಹಾಲ್, ಸುಸಜ್ಜಿತ ಆರು ಕೊಠಡಿ, 22 ಶೌಚಾಲಯವಿರುವ ಸ್ನಾನಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿಗೆ ಫಿಲ್ಟರ್ ವ್ಯವಸ್ಥೆ ಇದ್ದು, ಇಡೀ ಒಳ ಕ್ರೀಡಾಂಗಣವನ್ನು ಸಿ.ಸಿ. ಕ್ಯಾಮರಾದ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆಡಳಿತ ಮಂಡಳಿಯ ಸಹಕಾರದಲ್ಲಿ ಕಾಲೇಜಿನ ಪ್ರಾಚಾರ್ಯ ಅಲೆಕ್ಸ್ ಐವನ್ ಸಿಕ್ವೇರಾ ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ. ನಾಗೇಶ್ ಈ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದಾರೆ.
ಹೊರ ರಾಜ್ಯಗಳಿಂದ ಬರುವವರಿಗೆ ಸರಕಾರಿ ಕಟ್ಟಡದಲ್ಲಿ ಮಾತ್ರ ಕ್ವಾರಂಟೈನ್ ಮಾಡಬೇಕು ಎಂಬ ಆದೇಶವಿದೆ ಎಂದು ವಾದಿಸುವವರಿಗೆ ಮಡಂತ್ಯಾರು ಗ್ರಾಮ ಪಂಚಾಯತ್ ಖಾಸಗಿ ಕಾಲೇಜಿನ ಸಹಕಾರದಲ್ಲಿ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ವ್ಯವಸ್ಥೆ ಕಲ್ಪಿಸುವ ಮೂಲಕ ತಕ್ಕುದಾದ ಉತ್ತರ ನೀಡಿದೆ.







