ಸ್ಥಳೀಯರ ಭೀತಿ ನಿವಾರಿಸಬೇಕಾದ್ದು ಆಡಳಿತದ ಜವಾಬ್ದಾರಿ

ಕೊರೋನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಪರವೂರಿನಿಂದ ಬಂದವರನ್ನು ಕ್ವಾರಂಟೈನಿಗೆ ಒಳಪಡಿಸಿ, ಅವರನ್ನು ನಿಗಾದಲ್ಲಿರಿಸಬೇಕಾದ್ದು ಅತೀ ಅಗತ್ಯ. ಇದೀಗ ಬೆಳ್ತಂಗಡಿ ತಾಲೂಕಿಗೂ ಹೊರ ರಾಜ್ಯಗಳಿಂದ ಬರುವ ಆಯಾ ಊರುಗಳ ಜನರನ್ನು ಅವರವರ ಊರುಗಳಲ್ಲೇ ಕ್ವಾರಂಟೈನಿಗೆ ಒಳಪಡಿಸಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ನಮ್ಮನಿಮ್ಮ ಊರುಗಳಲ್ಲಿ ವಾಸ್ತವ್ಯವಿರುವ ಎಲ್ಲರನ್ನೂ ಕೊರೋನಾ ಸೋಂಕಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮವಾಗಿ ಪರವೂರಿನಿಂದ ಬಂದವರನ್ನು 14ದಿನಗಳ ಕಾಲ ಕ್ವಾರಂಟೈನಿನಲ್ಲಿರಿಸಿ, ಅವರ ಆರೋಗ್ಯದ ಮೇಲೆ ನಿಗಾ ಇರಿಸುವುದು ಅತೀ ಅಗತ್ಯ.
ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯಾ ಗ್ರಾಮಗಳಿಗೆ ಹೊರ ರಾಜ್ಯಗಳಿಂದ ಬರುವ ಆಯಾ ಗ್ರಾಮಗಳ ಮೂಲನಿವಾಸಿಗಳಿಗೆ ಕ್ವಾರಂಟೈನಿಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಹಳ್ಳಿಗಳ ಮಂದಿಗೆ ಮೊದಲೇ ಕೊರೋನಾದ ಹೆಸರು ಕೇಳಿದರೆನೇ ಭಯ; ಇಂತಹದ್ದರಲ್ಲಿ ಹೊರ ರಾಜ್ಯದಲ್ಲಿ ಉದ್ಯೋಗ ಅಥವಾ ವ್ಯಾಪಾರ ನಡೆಸುತ್ತಿರುವ ತಮ್ಮೂರಿನ ಮಂದಿಯೇ ಊರಿಗೆ ಬರುತ್ತಾರೆ, ಅವರಿಗೆ ತಮ್ಮ ವಠಾರದಲ್ಲಿರುವ ಸರಕಾರಿ ಕಟ್ಟಡದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತದೆ ಎಂದರೆ ಹಳ್ಳಿಮಂದಿ ಭಯಭೀತರಾಗುವುದು ಸಹಜ.
ಇಂತಹ ಒಂದು ಭೀತಿ ಧರ್ಮಸ್ಥಳ ಅಶೋಕನಗರ ನಿವಾಸಿಗಳಲ್ಲೂ ಆವರಿಸಿದೆ. ಧರ್ಮಸ್ಥಳಕ್ಕೆ ಹೊರ ರಾಜ್ಯಗಳಿಂದ ಬರುವ ಧರ್ಮಸ್ಥಳದ ಮೂಲ ನಿವಾಸಿಗರಿಗೆ ಕ್ವಾರಂಟೈನಿಗೆ ಧರ್ಮಸ್ಥಳದ ಅಶೋಕನಗರದಲ್ಲಿರುವ ಸರಕಾರಿ ಆಶ್ರಮ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲು ಅಲ್ಲಿನ ಗ್ರಾಮ ಪಂಚಾಯತ್ ಮುಂದಾಗಿದೆ. ಆದರೆ ಗ್ರಾಮ ಪಂಚಾಯತ್ ಈ ವ್ಯವಸ್ಥೆಗೆ ಮುಂದಾಗುವ ಮುನ್ನ ಈ ವಿಚಾರವಾಗಿ ಅಶೋಕನಗರದ ನಿವಾಸಿಗರಿಗೆ ಸರಿಯಾದ ಮಾಹಿತಿ ನೀಡಿ, ಅವರಲ್ಲಿರುವ ಸಂದೇಹ-ಭಯ ನಿವಾರಿಸಬೇಕಾದ ಜವಾಬ್ದಾರಿ ನಿಭಾಯಿಸುವಲ್ಲಿ ಎಡವಿದೆ. ಕೊರೋನಾ ಸೋಂಕು ಹರಡುವ ಭಯದ ವಾತಾವರಣವಿರುವ ಇಂದಿನ ದಿನಗಳಲ್ಲಿ ತಮ್ಮ ಮನೆಗಳ ಹತ್ತಿರ ಪರವೂರುಗಳಿಂದ ಬರುವವರಿಗೆ ಕ್ವಾರಂಟೈನ್ ಮಾಡುತ್ತಾರೆ ಎಂದಾಗುವಾಗ ಸ್ಥಳೀಯರಲ್ಲಿ ಭಯ ಮೂಡುವುದು ಸಹಜ. ಇದಕ್ಕೆ ಧರ್ಮಸ್ಥಳದ ಅಶೋಕನಗರದ ನಿವಾಸಿಗರೂ ಹೊರತಲ್ಲ.
ಇದೀಗ ಅಶೋಕನಗರದ ನಿವಾಸಿಗರು ಧರ್ಮಸ್ಥಳ ಗ್ರಾಮ ಪಂಚಾಯತಿಗೆ ಮನವಿಯೊಂದನ್ನು ನೀಡಿ, ತಮ್ಮ ಕಾಲೊನಿಯ ಬಳಿಯಲ್ಲಿರುವ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್ ಸೆಂಟರ್ ತೆರೆಯುವುದಕ್ಕೆ ಆಕ್ಷೇಪ ಸಲ್ಲಿಸಿದ್ದಾರೆ; ಮನವಿಯನ್ನು ಗೌರವಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳ ಗ್ರಾಮ ಪಂಚಾಯತ್ ಮುಂದೇನು ಮಾಡಬಹುದು ಎಂದು ಚಿಂತಿಸುವಂತಾಗಿದೆ.
ಇಂತಹ ಸಂದರ್ಭಗಳಲ್ಲಿ ತಾಲೂಕು ಆಡಳಿತ ಅಗತ್ಯ ಇಲಾಖಾಧಿಕಾರಿಗಳ ಸಹಕಾರ ಪಡೆದು, ಕ್ವಾರಂಟೈನ್ ವ್ಯವಸ್ಥೆಯಿಂದ ಸ್ಥಳೀಯರಿಗೆ ಯಾವ ತೊಂದರೆ-ಸಮಸ್ಯೆ ಆಗುವುದಿಲ್ಲ ಎಂಬುದನ್ನು ಸ್ಥಳೀಯರಿಗೆ ಮನದಟ್ಟು ಮಾಡಬೇಕು. ಕೈಗೊಂಡ ಎಲ್ಲ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಬೇಕು. ಜೊತೆಗೆ ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆ-ಸಂದೇಹ ಬಂದರೂ ಸ್ಥಳೀಯ ನಿವಾಸಿಗರು ಸಂಪರ್ಕಿಸಲು ಅನುಕೂಲವಾಗುವಂತೆ ತಾಲೂಕು ಮಟ್ಟದ ಅಧಿಕಾರಿಗಳೆಲ್ಲರ ಮೊಬೈಲ್ ದೂರವಾಣಿಯ ನಂಬರ್ ಗಳನ್ನು ನೀಡಬೇಕು. ಆ ಮೂಲಕ ಕ್ವಾರಂಟೈನ್ ಬಗ್ಗೆ ಜನತೆಯಲ್ಲಿರುವ ಭಯ-ಭೀತಿ ನಿವಾರಿಸುವ ಜೊತೆಗೆ; ಕೊರೋನಾ ಸೋಂಕು ನಮ್ಮೂರಲ್ಲಿ ಹರಡದಂತೆ ಮುಂಜಾಗ್ರತೆಯಾಗಿ ಕ್ವಾರಂಟೈನ್ ವ್ಯವಸ್ಥೆ ಯಾಕೆ ಅನಿವಾರ್ಯ ಎಂಬುದನ್ನೂ ವಿವರಿಸಿ, ಎಲ್ಲರನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಾದ ಜವಾಬ್ದಾರಿ ತಾಲೂಕು ಆಡಳಿತದ್ದು.







