ಸಂಪಾದಕೀಯ

Facebook
Twitter
LinkedIn
WhatsApp

ರಾಜ್ಯದ 6000ಕ್ಕೂ ಅಧಿಕ ಗ್ರಾಮ ಪಂಚಾಯತುಗಳ ಪ್ರಸಕ್ತ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಜೂನ್ ಅಂತ್ಯದ ವೇಳೆಗೆ ಮುಗಿಯಲಿದೆ. ಪಂಚಾಯತ್ ರಾಜ್ ಕಾಯಿದೆಯಂತೆ ಪಂಚಾಯತುಗಳ ಅಧಿಕಾರಾವಧಿಯ 6ತಿಂಗಳ ಮೊದಲು ಚುನಾವಣೆ ಘೋಷಣೆಯಾಗಿ, ನಿಗದಿತ ಅವಧಿಗೆ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚನೆಗೆ ಅವಕಾಶ ಕಲ್ಪಿಸಬೇಕು. ಆದರೆ ಇದೀಗ ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ವಕ್ಕರಿಸಿರುವುದರಿಂದ, ಈ ಹೆಮ್ಮಾರಿಯಿಂದ ಬಚಾವಾಗಲು ಬದುಕು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ಸುಮಾರು 60ದಿನಗಳಷ್ಟು ಕಾಲ 4ಹಂತಗಳಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ನಿಗದಿತ ಸಮಯಕ್ಕೆ ಈ ಗ್ರಾಮ ಪಂಚಾಯತುಗಳಿಗೆ ಚುನಾವಣೆ ನಡೆಸಲು ರಾಜ್ಯ ಸರಕಾರಕ್ಕೆ ಹಾಗೂ ಚುನಾವಣಾ ಆಯೋಗಕ್ಕೆ ಸಾಧ್ಯವಾಗುತ್ತಿಲ್ಲ. ಇದು ನಿಜವಾದ ಸಮಸ್ಯೆಯೇ; ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಜನರಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಯಲು ಅನುಸರಿಸಲೇ ಬೇಕಾದ ರೀತಿ-ನಿಯಮಗಳ ಬಗ್ಗೆ ಸರಿಯಾದ ಜಾಗೃತಿ ಮೂಡಿಲ್ಲ. ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರದ ಪಾಲನೆ ಜನಪ್ರತಿನಿಧಿಗಳ ಸಹಿತ ವಿದ್ಯಾವಂತರಿಂದಲೇ ಸರಿಯಾಗಿ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಿ, ಚುನಾವಣೆ ಹೆಸರಲ್ಲಿ ಜನಜಾತ್ರೆ ನಡೆದರೆ ಕೊರೋನಾ ಸೋಂಕು ಇನ್ನಷ್ಟು ಅಪಾಯಕಾರಿಯಾಗಿ ಎಲ್ಲೆಡೆ ಹಬ್ಬುವ ಸಾಧ್ಯತೆಯಿದೆ. ಆದ್ದರಿಂದ ರಾಜ್ಯದ ಗ್ರಾಮ ಪಂಚಾಯತುಗಳ ಚುನಾವಣೆ ಮುಂದೂಡಿಕೆ ಸಕಾಲಿಕವೇ.
ಆದರೆ, ಅವಧಿ ಮುಗಿದ ಗ್ರಾಮ ಪಂಚಾಯತುಗಳ ಆಡಳಿತ ಮಂಡಳಿಗಳು ನಿಯಮದಂತೆ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆಗ ಗ್ರಾ ಪಂಚಾಯತುಗಳ ಆಡಳಿತ ನಿರ್ವಹಣೆಗೆ ಬದಲಿ ವ್ಯವಸ್ಥೆ ಮಾಡುವ ಜವಾಬ್ದಾರಿ ರಾಜ್ಯ ಸರಕಾರದ್ದು. 1993ರ ಪಂಚಾಯತ್ ರಾಜ್ ಅಧಿನಿಯಮದ ತಿದ್ದುಪಡಿಯಂತೆ ಅವಧಿ ಮೀರಿದ ಗ್ರಾಮ ಪಂಚಾಯತಿನ ಆಡಳಿತ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅಥವಾ ಹಾಲಿ ಇರುವ ಗ್ರಾಮ ಪಂಚಯತ್ ಸದಸ್ಯರಷ್ಟೇ ಬಲದ ಆಡಳಿತ ಮಂಡಳಿಯನ್ನು ನೇಮಿಸುವ ಅಧಿಕಾರ ಸರಕಾರಕ್ಕಿದೆ. ರಾಜ್ಯದ ಬಿಜೆಪಿ ಸರಕಾರ ಇದೀಗ ಚುನಾಯಿತ ಆಡಳಿತ ಮಂಡಳಿಯ ಅವಧಿ‌ ಮೀರಿದ ರಾಜ್ಯದ 6,000ಕ್ಕೂ ಅಧಿಕ ಗ್ರಾಮ ಪಂಚಾಯತುಗಳಿಗೆ ನೂತನ ಆಡಳಿತ ಮಂಡಳಿಯನ್ನು ಜಿಲ್ಲಾಧಿಕಾರಿಗಳ‌ ಮೂಲಕ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ ಎಂದು ಸ್ವತಹ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಈ ಆಡಳಿತ ಮಂಡಳಿಗಳು ಬಿಜೆಪಿಯ ರಾಜಕೀಯ ಮರಿಪುಡಾರಿಗಳ ಆಶ್ರಯತಾಣವಾಗದಿರಲಿ ಎಂಬುದೇ ನಾಗರಿಕರ ಆಗ್ರಹ.
ಮುಂದೆ ರಾಜ್ಯದಲ್ಲಿ 6ತಿಂಗಳ ಬಳಿಕವೂ ಗ್ರಾಮ ಪಂಚಾಯತುಗಳಿಗೆ ಚುನಾವಣೆ ನಡೆಯುವ ಭರವಸೆ ಇಲ್ಲ. ಕೊರೋನಾ ಹೆಮ್ಮಾರಿಯು ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಹೋಗದು ಎಂಬ ಕಹಿಸತ್ಯ ಬಹುತೇಕರಿಗೆ ತಿಳಿದಿದೆ. ಸೋಂಕು ತಗಲದಂತೆ ಸೂಕ್ತ ಮುಂಜಾಗ್ರತೆಯೊಂದಿಗೆ ಕೊರೋನಾದೊಂದಿಗೆ ಹೊಂದಾಣಿಕೆಯ ಬದುಕು ಕಟ್ಟಿಕೊಳ್ಳುವುದಷ್ಟೇ ಇಂದು ನಮ್ಮ ಮುಂದಿರುವ ಏಕೈಕ ಆಯ್ಕೆ. ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಲೇಬೇಕಾದ ಮುಂಜಾಗ್ರತಾ ಕ್ರಮಗಳ ಅನುಷ್ಟಾನ ಎಲ್ಲೆಡೆ ಪರಿಪೂರ್ಣವಾಗುವವರೆಗೆ ಗ್ರಾಮ ಪಂಚಾಯತುಗಳಿಗೆ ಚುನಾವಣೆ ನಡೆಸಿ, ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುವ ದುಸ್ಸಾಹಸಕ್ಕೆ ಸರಕಾರ ಕೈಹಾಕದು. ಅಂದಮೇಲೆ, ಗ್ರಾಮ ಪಂಚಾಯತುಗಳಿಗೆ ಸರಕಾರ ನೇಮಿಸಲಿರುವ ಆಡಳಿತ ಮಂಡಳಿಯ ಅಧಿಕಾರಾವಧಿ 6ತಿಂಗಳು ಅಥವಾ 1ವರ್ಷ ಎಂದು ಈಗಲೇ ತೀರ್ಮಾನಿಸಲಾಗದು. ಪರಿಸ್ಥಿತಿ ಹೀಗಿರುವಾಗ ಗ್ರಾಮ‌ ಪಂಚಾಯತುಗಳ ಆಡಳಿತವನ್ನು ಬಿಜೆಪಿಯ ಗ್ರಾಮೀಣ ರಾಜಕೀಯ ನಿರಾಶ್ರಿತರ ಕೈಗೆ ನೀಡೋದು ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತೆಯೇ. ಈ ಆಡಳಿತ ಮಂಡಳಿಗೆ ಸದಸ್ಯರ ನೇಮಕದ ಅಧಿಕಾರ ಜಿಲ್ಲಾಧಿಕಾರಿಗಳದ್ದಾದರೂ, ಜಿಲ್ಲಾಧಿಕಾರಿಗಳು ಬಿಜೆಪಿ ನಾಯಕರು ಶಿಫಾರಸು ಮಾಡುವ ಹೆಸರುಗಳಿಗೆ ಅಂಕಿತಮುದ್ರೆ ಹಾಕುತ್ತಾರೆ ಎಂಬುದು ಎಲ್ಲರೂ ತಿಳಿದಿರುವ ಸತ್ಯ. ಹೀಗಿರುವಾಗ, ಈಗ ಗ್ರಾಮ‌ಪಂಚಾಯತುಗಳ ಆಡಳಿತ ಮಂಡಳಿಗೆ ಸರಕಾರದಿಂದ ನೇಮಕಗೊಳ್ಳುವ ಸದಸ್ಯರು; ಮುಂದಿನ ಗ್ರಾಮ ಪಂಚಾಯತು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸರಕಾರ ಕಾನೂನಿಗೆ ತಿದ್ದುಪಡಿ ತಂದರೆ‌ ಮಾತ್ರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ನಿಜ ಅರ್ಥದಲ್ಲಿ ಗಟ್ಟಿಯಾಗುತ್ತದೆ. ಇಲ್ಲವಾದಲ್ಲಿ ಅವಧಿ ಮೀರಿದ ಗ್ರಾಮ ಪಂಚಾಯತುಗಳ ಆಡಳಿತ ಮಂಡಳಿಗೆ ಆಯಾ ಗ್ರಾಮಗಳಲ್ಲಿರುವ ನಿವೃತ್ತ ಶಿಕ್ಷಕರನ್ನು, ನಿವೃತ್ತ ಸರಕಾರಿ ನೌಕರರನ್ನು ಅಥವಾ ವಿವಿಧ ಸೇವಾಸಂಸ್ಥೆಗಳಲ್ಲಿ ದುಡಿದ-ದುಡಿಯುತ್ತಿರುವ ಗಣ್ಯರನ್ನು ಸದಸ್ಯರನ್ನಾಗಿ ನೇಮಿಸಿದರೆ ಸರಕಾರದ ಗೌರವವೂ ಉಳಿಯುತ್ತದೆ; ಗ್ರಾಮ ಪಂಚಾಯತುಗಳೂ ಜನತೆಯ ವಿಶ್ವಾಸ ಉಳಿಸಿಕೊಳ್ಳುತ್ತದೆ. ಅವಧಿ ಮುಗಿದ ಗ್ರಾಮ ಪಂಚಾಯತುಗಳಿಗೆ ಸದಸ್ಯರ ನೇಮಕ ಮಾಡುವಾಗ ಗ್ರಾಮೀಣ ರಾಜಕೀಯ ನಿರಾಶ್ರಿತರಿಗೆ ಅವಕಾಶ ಕಲ್ಪಿಸಿದರೆ ಅಥವಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಬಿಜೆಪಿ ಪಕ್ಷದ ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟರೆ ಅದು ಪ್ರಜಾಪ್ರಭುತ್ವದ ಅತ್ಯಾಚಾರ ಹಾಗೂ‌ ಕೊಲೆಯಾಗುತ್ತದೆ. ಹಾಗಾಗದಿರಲಿ.

Latest News

Related Posts