ಬೆಳ್ತಂಗಡಿ ಮಾರಿಗುಡಿ ಬಳಿ ಸೊಳ್ಳೆ ಉತ್ಪಾದನಾ ಕೇಂದ್ರ

Facebook
Twitter
LinkedIn
WhatsApp

ಸಾಂಕ್ರಾಮಿಕ‌ ರೋಗದ ಕಾರ್ಖಾನೆಗೆ ಕಡಿವಾಣ ಬಿದ್ದೀತೇ

ಜನತೆಯ ಚಿತ್ತ ಕರ್ತವ್ಯನಿಷ್ಠ ತಹಶೀಲ್ದಾರರತ್ತ

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯರಸ್ತೆ ಬಳಿ ಭಕ್ತರು ಅನೇಕ ವರ್ಷಗಳಿಂದ ಆರಾಧಿಸಿಕೊಂಡು ಬರುವ ಮಾರಿಯಮ್ಮನ ದೇಗುಲವಿದೆ. ಈ ದೇಗುಲದ ಪಕ್ಕದಲ್ಲಿರುವ ಮುಖ್ಯರಸ್ತೆ ಬದಿಯ ಚರಂಡಿಯಲ್ಲಿ ಹರಿಯುವ ಪರಿಸರದ ಹೊಟೇಲುಗಳ ಹಾಗೂ ವಾಣಿಜ್ಯ ಸಂಕೀರ್ಣ-ವಸತಿ ಸಮುಚ್ಛಯಗಳ ತ್ಯಾಜ್ಯ ನೀರಿನಿಂದ ಮಾರಿಯಮ್ಮ ದೇವರೇ ಮೂಗು ಮುಚ್ಚಿ ಕೋರಬೇಕಾದ ದುರ್ಗತಿ ಬಂದೊದಗಿದೆ.
ಇಲ್ಲಿ ಹರಿಯುತ್ತಿರುವ ಕೊಳಚೆ ತ್ಯಾಜ್ಯ ನೀರು ದುರ್ನಾತ ಬೀರುವುದರ ಜೊತೆಗೆ ಸಾಂಕ್ರಾಮಿಕ ರೋಗಗಳ ಕಾರ್ಖಾನೆಯಂತಿದೆ. ಈಗಾಗಲೇ ಕೊರೋನಾ ಸೋಂಕು ಹರಡುವಿಕೆ ಭೀತಿಯಿಂದ ಕಂಗಾಲಾಗಿರುವ ಜನತೆಗೆ ದುರ್ನಾತ ಬೀರುತ್ತಿರುವ ಈ ಚರಂಡಿಯ ತ್ಯಾಜ್ಯ ಕೊಳಚೆ ನೀರು ಸೊಳ್ಳೆಗಳ ತವರೂರಾಗಿ; ಡೆಂಗ್ಯೂ,‌ ಮಲೇರಿಯಾದಂತಹ ಸಾಂಕ್ರಾಮಿಕ ರೋಗವನ್ನು ಹರಡುವ ಭೀತಿ ಹುಟ್ಟಿಸಿದೆ. ಈ ಪರಿಸರದಲ್ಲಿ ಓಡಾಡುವ ಜನ ಮಾಸ್ಕ್ ಧರಿಸಿದರೂ ದುರ್ನಾತ ಸೇವಿಸಿ, ಸೊಳ್ಳೆಗಳಿಂದ ಕಚ್ಚಿಸಿಕೊಂಡೇ ಓಡಾಡಬೇಕಾದ ಸಂಕಷ್ಟ ಎದುರಿಸುವಂತಾಗಿದೆ.
ಮಕ್ಕಳಲ್ಲಿ ಶಿಸ್ತು, ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಿ, ಸಾಂಕ್ರಾಮಿಕ ರೋಗಗಳ ತಡೆಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಶಿಕ್ಷಣ ನೀಡುವ ಶಿಕ್ಷಣ ಇಲಾಖೆಯ ಕಛೇರಿಯ ಪಕ್ಕದಲ್ಲೇ ಇರುವ ಈ ಸೊಳ್ಳೆ ಉತ್ಪಾದನಾ ಕೇಂದ್ರದ ಬಗ್ಗೆ ಶಿಕ್ಷಣ ಇಲಾಖೆ ಯಾಕೆ ಮೌನವಾಗಿದೆ ಎಂಬುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತರಿಸಬೇಕಾಗಿದೆ. ಇದೀಗ ಈ ಸೊಳ್ಳೆ ಉತ್ಪಾದನಾ ಕೇಂದ್ರದ ಸಂಕಟದಿಂದ ಪಾರಾಗಲು ಇಲ್ಲಿನ ನಾಗರಿಕರಿಗೆ ಉಳಿದಿರುವ ಆಶಾಕಿರಣ ಬೆಳ್ತಂಗಡಿಯ ತಹಶೀಲ್ದಾರ್ ನಿವೃತ್ತ ಸೇನಾನಿ ಗಣಪತಿ ಶಾಸ್ತ್ರಿ ಮಾತ್ರ. ಈ ಸಾಂಕ್ರಾಮಿಕ ರೋಗದ ಉಗಮ ಸ್ಥಾನದಿಂದ ಹರಡಬಹುದಾದ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ಈ ಚರಂಡಿಗೆ ಸಕಲ ತ್ಯಾಜ್ಯ ನೀರು ಹರಿಯಬಿಟ್ಟು ಗಬ್ಬೆಬ್ಬಿಸುತ್ತಿರುವ ಪರಿಸರದ ಹೊಟೇಲು, ವಸತಿ ಸಮುಚ್ಛಯ ಹಾಗೂ ವಾಣಿಜ್ಯ ಸಂಕೀರ್ಣಗಳ ವಿರುದ್ಧ ಕಠಿಣ ಕಾನೂನು ಕ್ರಮ ತೀರಾ ಅನಿವಾರ್ಯ. ಇಂತಹ ಕಠಿಣ ಕಾನೂನು‌ ಕ್ರಮ ಕೈಗೊಳ್ಳುವ ಧೀಮಂತಿಕೆಯನ್ನು ಕರ್ತವ್ಯನಿಷ್ಠ ತಹಶೀಲ್ದಾರ್ ಎಂದೇ ಜನಸಾಮಾನ್ಯರಿಂದ ಗುರುತಿಸಲ್ಪಟ್ಟ ಗಣಪತಿ ಶಾಸ್ತ್ರಿಯವರಿಂದ ನಿರೀಕ್ಷಿಸಬಹುದಾ ಎಂಬುದು ಜನಸಾಮಾನ್ಯರ ಮನದಲ್ಲಿ ಉಳಿದಿರುವ ಪ್ರಶ್ನೆ.

Latest News

Related Posts