ಬೆಳ್ತಂಗಡಿ ಮಾರಿಗುಡಿ ಬಳಿಯ ಚರಂಡಿ ದುರ್ನಾತ ಮುಕ್ತ

ನಿನ್ನೆಯಷ್ಟೇ (ಮೇ 20) ರಂದು ಬೆಳ್ತಂಗಡಿ ಮಾರಿಗುಡಿಯ ಬಳಿಯ ಚರಂಡಿಯ ದುರವಸ್ಥೆಯ ಬಗ್ಗೆ, ಹರಡುತ್ತಿರುವ ಗಬ್ಬು ವಾಸನೆಯ ಬಗ್ಗೆ, ಸೊಳ್ಳೆ ಉತ್ಪಾದನೆಯಾಗುತ್ತಿರುವ ಆತಂಕದ ಬಗ್ಗೆ ಹಾಗೂ ಇವೆಲ್ಲದರ ಪರಿಣಾಮ ಸಾಂಕ್ರಾಮಿಕ ರೋಗ ಹರಡುವ ಭೀತಿಯ ಬಗ್ಗೆ ಜೈ ಕನ್ನಡಮ್ಮದಲ್ಲಿ ಸಚಿತ್ರ ವರದಿ ಪ್ರಕಟಿಸಿದ್ದೆವು. ಬೆಳ್ತಂಗಡಿ ಪಟ್ಟಣ ಪಂಚಾಯತಿನ ದಕ್ಷ ಆಡಳಿತಾಧಿಕಾರಿ-ಬೆಳ್ತಂಗಡಿ ತಾಲೂಕು ತಹಶೀಲ್ದಾರ್-ನಿವೃತ್ತ ಸೇನಾನಿ ಗಣಪತಿ ಶಾಸ್ತ್ರಿ ತಕ್ಷಣ ಕಾರ್ಯೋನ್ಮುಖರಾಗಿ; ಮೇ 21ರಂದೇ ಪಟ್ಟಣ ಪಂಚಾಯತಿನ ಮೂಲಕ ಚರಂಡಿಯನ್ನು ಸಂಪೂರ್ಣ ದುರಸ್ಥಿಗೊಳಿಸಿ, ಬ್ಲೀಚಿಂಗ್ ಪೌಡರ್ ಹರಡಿಸುವ ಮೂಲಕ ಚರಂಡಿಯನ್ನು ದುರ್ನಾತ ಹಾಗೂ ಸೊಳ್ಳೆ ಉತ್ಪಾದನೆಯಿಂದ ಮುಕ್ತಗೊಳಿಸಿ, ಜನತೆಯ ಮನದಲ್ಲಿ ಆವರಿಸಿದ್ದ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ದೂರಗೊಳಿಸಿದ್ದಾರೆ.
ಇದೀಗ ಸರ್ವ ತ್ಯಾಜ್ಯ ನೀರನ್ನು ಈ ಚರಂಡಿಗೆ ಬಿಡುವ ಪರಿಸರದ ಹೊಟೇಲು ಮಾಲೀಕರಿಗೆ, ವಾಣಿಜ್ಯ ಸಂಕೀರ್ಣದ ಮಾಲೀಕರಿಗೆ ಹಾಗೂ ಬಾಡಿಗೆದಾರರಿಗೆ, ವಸತಿ ಸಮುಚ್ಛಯದ ಮಾಲೀಕರಿಗೆ ಹಾಗೂ ಬಾಡಿಗೆದಾರರಿಗೆ ಪಟ್ಟಣ ಪಂಚಾಯತ್ ಆಡಳಿತ ಖಡಕ್ ಸೂಚನೆ ನೀಡಿ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತ್ಯಾಜ್ಯ ನೀರನ್ನು ಈ ಚರಂಡಿಗೆ ಹರಿಯಬಿಟ್ಟು ಪರಿಸರ ಹಾನಿಮಾಡದಂತೆ ಎಚ್ಚರಿಸಬೇಕು. ಪಟ್ಟಣ ಪಂಚಾಯತ್ ನಿಯಮದಂತೆ ತ್ಯಾಜ್ಯ ನೀರು ಇಂಗಿಸುವ ಸುಸಜ್ಜಿತ ಇಂಗು ಗುಂಡಿ ನಿರ್ಮಿಸಿಕೊಳ್ಳದ ಹೊಟೇಲುಗಳ ಪರವಾನಿಗೆಯನ್ನು ರದ್ದು ಪಡಿಸುವ ನಿರ್ದಾಕ್ಷಿಣ್ಯ ಕ್ರಮಕ್ಕೆ ಪಟ್ಟಣ ಪಂಚಾಯತ್ ಮುಂದಾಗಬೇಕು. ಆ ಮೂಲಕ ಕೊರೋನಾ ಸೋಂಕಿನ ಭೀತಿಯಲ್ಲಿರುವ ಪಟ್ಟಣದ ಜನತೆ ಇತರ ಸಾಂಕ್ರಾಮಿಕ ರೋಗಗಳ ಭೀತಿಗೂ ಒಳಗಾಗದಂತಹ ಉತ್ತಮ ಆಡಳಿತವನ್ನು ಸಧ್ಯಕ್ಕೆ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಯಾಗಿರುವ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರಿಂದ ಜನತೆ ನಿರೀಕ್ಷಿಸುತ್ತಿದ್ದಾರೆ. ಜನತೆಯ ನ್ಯಾಯಬದ್ಧ ನಿರೀಕ್ಷೆ ಹುಸಿಯಾಗದಿರಲಿ.






