ಮೂಡುಬಿದಿರೆಯಲ್ಲಿ ಹೊಂಚು ಹಾಕಿ ಕುಳಿತಿದೆ ಕೊರೋನಾ
ಮೂಡುಬಿದಿರೆ : ಮುಂಬಯಿ ವಲಸಿಗರಿಂದಲೇ ಕರ್ನಾಟಕದಲ್ಲಿ ಕೊರೋನಾ ಮೃತ್ಯುಕೂಪವಾಗಿ ಕಾಡತೊಡಗಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ಅದಕ್ಕಾಗಿ ಮುಂಬಯಿಯಿಂದ ಕರ್ನಾಟಕ ರಾಜ್ಯವನ್ನು ಯಾರೂ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಗಡಿ ಬಾಗದಲ್ಲಿ ಅಂತೂ ಹೆದರಿಸಿ, ಬೆದರಿಸಿ, ಲಾಠಿಚಾರ್ಜ್ ನಡೆಸಿ ಜನರು ಗಡಿಯೊಳಗೆ ಪ್ರವೇಶಿಸದಂತೆ ಪೊಲೀಸರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ.
ಆದರೆ ಈಗಾಗಲೇ ಗಡಿಯೊಳಗೆ ಬಂದು ಕ್ವಾರಂಟೈನ್ ಸ್ವೀಕರಿಸಿದವರನ್ನು, ಅವರು ಕರ್ನಾಟಕಕ್ಕೆ ಬರುವಾಗ ಉಪಯೋಗಿಸಿರುವ ವಾಹನಗಳನ್ನು ಆ ವಾಹನಗಳ ಚಾಲಕರನ್ನು ಸೂಕ್ತ ಕ್ರಮಕ್ಕೆ ಒಳಪಡಿಸುವ ಜವಾಬ್ದಾರಿ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ್ದು. ಆದರೆ ಮೂಡುಬಿದಿರೆಯಲ್ಲಿ ಈ ಯಾವ ಕೆಲಸಗಳೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಕ್ವಾರಂಟೈನ್ ಗೆ ಒಳಗಾದವರಿಗೆ ಆಹಾರವನ್ನು ಮನೆಯವರೇ ಬೇಯಿಸಿ ತಂದು ರಾಜಾರೋಷವಾಗಿ ಒಪ್ಪಿಸುತ್ತಿದ್ದಾರೆ. ಕ್ವಾರಂಟೈನ್ ಗೆ ಒಳಗಾದವರ ಬಟ್ಟೆ ಬರೆಗಳನ್ನು ತೊಳೆಯಲು ಮನೆಯ ಮಂದಿ ಯಾವುದೇ ಭೀತಿಯಿಲ್ಲದೆ ಬಂದು ಒಯ್ಯುತ್ತಿದ್ದಾರೆ. ಕ್ವಾರಂಟೈನ್ ಸ್ವೀಕರಿಸಿರುವ ವಲಸಿಗರು ಪ್ರಯಾಣ ಮಾಡಿರುವ ವಾಹನಗಳು ಜನನಿಬಿಡ ಪ್ರದೇಶಗಳಲ್ಲಿ ರಾಜಾರೋಷವಾಗಿ ನಿಲುಗಡೆಯಾಗುತ್ತಿವೆ. ಆ ವಾಹನಗಳ ಚಾಲಕರೂ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲಿ ಚಹಾ ಕುಡಿಯುತ್ತಿದ್ದಾರೆ. ಇಲ್ಲಿ ಹತ್ತಾರು ಚಹಾ ಅಂಗಡಿಗಳೂ ಎಗ್ಗಿಲ್ಲದೆ ವ್ಯವಹಾರ ನಡೆಸುತ್ತಿವೆ. ನೋಡಿ ಇಲ್ಲೊಂದು ಮುಂಬಯಿಯಿಂದ ಬಂದ ಹುಂಡೈ ಕ್ರೇಟಾ ಕಾರು ನೋಂದಣಿ ಸಂಖ್ಯೆ mh 46 az 9900 ನಿಶ್ಮಿತಾ ಟವರ್ಸ್ ಎದುರು ಎರಡು ಗಂಟೆಗೂ ಹೆಚ್ಚುಕಾಲ ನಿಂತಿದ್ದರೂ ಯಾರೂ ಕೇಳುವವರಿಲ್ಲ. ಆ ಕಾರಿನ ಚಾಲಕ ಊರೆಲ್ಲಾ ಸುತ್ತಾಡಿದ್ದಾನೆ. ಅಲ್ಲಿ ಇಲ್ಲಿ ಅಂತ ಚಹಾ ಕುಡಿದು, ತಿಂಡಿ ತಿಂದು, ಎಟಿಎಂನಿಂದ ಹಣ ತೆಗೆದು, ಸಿಗರೇಟು ಸೇದಿ… ಹೀಗೆ ಕೊರೋನಾ ಭೀತಿ ಎಷ್ಟು ಹರಡಲು ಸಾಧ್ಯವೋ ಅಷ್ಟು ಹರಡಿದ್ದಾನೆ. ಅವನು ಭೀತಿಯನ್ನು ಮಾತ್ರ ಹರಡಿದ್ದರೆ ಪರವಾಗಿಲ್ಲ. ಜೊತೆಗೆ ಅವನು ಕೊರೋನಾವನ್ನೂ ಹರಡಿದ್ದರೆ ಮೂಡುಬಿದಿರೆಯ ಮುಂದಿನ ಗತಿಯೇನು ಎಂದು ಜನ ಪ್ರಶ್ನಿಸುವಂತಾಗಿದೆ.






