ಉತ್ತರಕ್ರಿಯೆಯಲ್ಲಿ ಭಾಗವಹಿಸಲು ಬರುತ್ತಿದ್ದವರ ಮೇಲೆ ನಿಪ್ಪಾಣಿ ಪೊಲೀಸರ ದೌರ್ಜನ್ಯ
ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನರ ಭರವಸೆಯ ಮೇಲೆ ನಂಬಿಕೆಯಿಟ್ಟು ಮೃತ ತಮ್ಮನ ಉತ್ತರಕ್ರಿಯೆ ನಡೆಸಲು ಮಹಾರಾಷ್ಟ್ರದ ಪುಣೆಯಿಂದ ಮೂಡುಬಿದಿರೆಗೆ ಹೊರಟಿದ್ದ ವ್ಯಕ್ತಿಯೊಬ್ಬರ ಮೇಲೆ ನಿಪ್ಪಾಣಿ ಚೆಕ್ ಪೋಸ್ಟ್ ಬಳಿ ಕರ್ನಾಟಕದ ಪೊಲೀಸರು ದೌರ್ಜನ್ಯ ಎಸಗಿದ್ದು ಪೊಲೀಸರ ಈ ಅನಿರೀಕ್ಷಿತ ಧಾಳಿಯಿಂದ ತೀವ್ರವಾಗಿ ಗಾಯಗೊಂಡು, ಮಾನಸಿಕವಾಗಿ ನೊಂದಿರುವ ವ್ಯಕ್ತಿ ಮತ್ತೆ ಪುಣೆಗೆ ಮರಳಿರುವ ಘಟನೆ ಮೇ 21ರ ಮಧ್ಯಾಹ್ನ ನಡೆದಿದೆ.
ಮೂಲತಃ ಮೂಡುಬಿದಿರೆಯವರಾದ ಶರತ್ ದೇವಾಡಿಗರ ಕಿರಿಯ ಸಹೋದರ ಮುಂಬಯಿಯಲ್ಲಿ ಕಾಯಿಲೆಯಿಂದ ಮೇ 19ರಂದು ಮೃತಪಟ್ಟಿದ್ದರು. ಅದೇ ದಿನ ಮೃತರ ಪತ್ನಿ ಮೂಡುಬಿದಿರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಹಸಿ ಬಾಣಂತಿಗೆ ಅವರ ಗಂಡ ಮೃತರಾಗಿರುವ ವಿಚಾರವನ್ನೂ ತಿಳಿಸಿರಲಿಲ್ಲ. ಕಾಯಿಲೆಯಿಂದ ಮೃತಪಟ್ಟಿರುವ ವ್ಯಕ್ತಿಯ ಇನ್ನೋರ್ವ ಹಿರಿಯ ಸಹೋದರ ವಿದೇಶದಲ್ಲಿ ಉದ್ಯೋಗದಲ್ಲಿರುವ ಕಾರಣ ಊರಿಗೆ ಸಧ್ಯ ಊರಿಗೆ ಮರಳುವ ಸ್ಥಿತಿಯಲ್ಲಿಲ್ಲದ ಕಾರಣ ಕಾಯಿಲೆಯಿಂದ ಮೃತಪಟ್ಟಿರುವ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಮಹಾರಾಷ್ಟ್ರ ಸರಕಾರವೇ ನಡೆಸಿರುವ ಕಾರಣ ಮೃತವ್ಯಕ್ತಿಯ ಸಹೋದರ ಶರತ್ ದೇವಾಡಿಗರ ಮೇಲೆ ಮೃತವ್ಯಕ್ತಿಯ ಉತ್ತರಕ್ರಿಯೆ ನಡೆಸುವುದು ಮತ್ತು ಮೃತವ್ಯಕ್ತಿಯ ಪತ್ನಿ ಹಸಿ ಬಾಣಂತಿ ಯನ್ನು ಸಂತೈಸುವ ಜವಾಬ್ದಾರಿಯೂ ಇತ್ತು. ಆದ ಕಾರಣ ಮೂಡುಬಿದಿರೆ ಯಲ್ಲಿಯೇ ಉತ್ತರಕ್ರಿಯೆ ನಡೆಸುವುದೆಂದು ತೀರ್ಮಾನಿಸಿದ ಅವರು ಪುಣೆಯಲ್ಲಿಯೇ ಆರೋಗ್ಯ ತಪಾಸಣೆಗೆ ಒಳಪಟ್ಟು, ಅಲ್ಲಿನ ಅಧಿಕಾರಿಗಳಿಂದ ಮೂಡುಬಿದಿರೆಗೆ ತೆರಳಲು ಅನುಮತಿಯನ್ನೂ ಪಡೆದಿದ್ದರೆಂದು ತಿಳಿದು ಬಂದಿದೆ. ಅಗತ್ಯವಿದ್ದರೆ ತಾವು ಕ್ವಾರಂಟೈನ್ ಸ್ವೀಕರಿಸಲೂ ಸಿದ್ಧ ಎಂಬುದನ್ನೂ ಶರತ್ ದೇವಾಡಿಗ ಅವರು ಒಪ್ಪಿಕೊಂಡಿದ್ದ ರೆಂದೂ ಹೇಳಲಾಗುತ್ತಿದೆ. ಈ ವಿಚಾರವನ್ನು ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನರ ಗಮನಕ್ಕೆ ತಂದಾಗ ಕರ್ನಾಟಕ ಗಡಿಯೊಳಗೆ ಪ್ರವೇಶಿಸಿ, ಅಲ್ಲಿಂದ ಮೂಡುಬಿದಿರೆ ಯವರೆಗೆ ಪ್ರಯಾಣಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತಾವು ತಕ್ಷಣ ತಯಾರಿಸಿ ಪ್ರಯಾಣಕ್ಕೆ ಅನುವು ಮಾಡಿಕೊಡುವುದಾಗಿ ಶಾಸಕರು ಭರವಸೆಯನ್ನೂ ನೀಡಿದ್ದರೆಂದು ಹೇಳಲಾಗುತ್ತಿದೆ. ತಕ್ಷಣ ಪುಣೆಯಿಂದ ಮೂಡುಬಿದಿರೆಗೆ ಪ್ರಯಾಣ ಪ್ರಾರಂಭಿಸುವಂತೆಯೂ ಸೂಚಿಸಿದ್ದರೆಂದು ತಿಳಿದುಬಂದಿದೆ.
ಶಾಸಕರ ಭರವಸೆ ಸಿಕ್ಕರುವ ಕಾರಣ ಭಾರದ ಹೃದಯದಿಂದಲೇ ಶರತ್ ದೇವಾಡಿಗ ಅವರು ರೂ. 21,000ಕ್ಕೆ ಕಾರೊಂದನ್ನು ಬುಕ್ ಮಾಡಿ ತಮ್ಮ ಸ್ನೇಹಿತರೊಬ್ಬರೊಂದಿಗೆ ನಿನ್ನೆ ರಾತ್ರಿಯೇ ಪುಣೆಯಿಂದ ಹೊರಟು ಬೆಳಗಿನ ಜಾವ 5-30ಕ್ಕೆ ನಿಪ್ಪಾಣಿ ಚೆಕ್ ಪೋಸ್ಟ್ ಬಳಿ ತಲುಪಿದ್ದರು. ಚೆಕ್ ಪೋಸ್ಟ್ ಬಳಿ ಸಾಕಷ್ಟು ವಾಹನಗಳು ಜಮಾಯಿಸಿದ್ದ ಕಾರಣ ಚೆಕ್ ಪೋಸ್ಟ್ ನಿಂದ 1ಕಿ.ಮೀ. ದೂರದಲ್ಲಿ ಶರತ್ ಅವರು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಲಾಗಿತ್ತು.
ಮಹಾರಾಷ್ಟ್ರ ಸರಕಾರ ನೀಡಿರುವ ಅನುಮತಿ ಪತ್ರದಲ್ಲಿ ಶರತ್ ದೇವಾಡಿಗ ಅವರ ಪ್ರಕರಣವನ್ನು ತೀರಾ ತುರ್ತು ಎಂದು ಪರಿಗಣಿಸಿ ಅವರಿಗೆ ಮೂಡುಬಿದಿರೆವರೆಗೂ ಪ್ರಯಾಣಿಸಲು ಅನುಮತಿ ನೀಡಲಾಗಿದ್ದರೂ ಮೂಡುಬಿದಿರೆ ಶಾಸಕರ ಶಿಫಾರಸು ಪತ್ರ ಕೈಸೇರದೆ ಚೆಕ್ ಪೋಸ್ಟ್ ದಾಟಿ ಪ್ರಯಾಣಿಸಲು ಸಾಧ್ಯವಿರಲಿಲ್ಲ. ದ.ಕ. ಜಿಲ್ಲಾಡಳಿತದ ಅನುಮತಿ ಪತ್ರ ಸಿದ್ಧಗೊಂಡಿದೆ. ಇನ್ನರ್ಧ ಗಂಟೆಯಲ್ಲಿ ಅದು ನಿಪ್ಪಾಣಿ ಚೆಕ್ ಪೋಸ್ಟ್ ಅಧಿಕಾರಿಗಳ ಕೈಸೇರಲಿದೆ ಎಂಬ ಖಚಿತ ಮಾಹಿತಿಯನ್ನು ನಂಬಿದ ಶರತ್ ದೇವಾಡಿಗ ಅವರು ತಾವು ಪ್ರಯಾಣದ ವೇಳೆ ಸೇವಿಸಲು ತಂದಿದ್ದ ಬಿಸ್ಕತ್ತು ಮತ್ತು ನೀರಿನ ಬಾಟಲಿಯನ್ನು ಕೈಯಲ್ಲಿ ಹಿಡಿದು ಕಾರಿನಿಂದಿಳಿದು ತಮ್ಮ ಸ್ನೇಹಿತನೊಂದಿಗೆ ಚೆಕ್ ಪೋಸ್ಟ್ ಕಡೆಗೆ ನಡೆಯಲಾರಂಭಿಸಿದರು. ಇದೇ ಸಂದರ್ಭ ಎರಡು ಜೀಪುಗಳಲ್ಲಿ ಬಂದ ಕರ್ನಾಟಕದ ಪೊಲೀಸರ ತಂಡ ಇಬ್ಬರನ್ನೂ ಸುತ್ತುವರಿದು ಯದ್ವಾತದ್ವಾ ಲಾಠಿಬೀಸಿದೆ. ಈ ಅನಿರೀಕ್ಷಿತ ಪೊಲೀಸ್ ಧಾಳಿಯಿಂದ ರಸ್ತೆಗೆ ಬಿದ್ದ ಶರತ್ ದೇವಾಡಿಗರ ಸಮೀಪದಿಂದಲೇ ಟ್ರಕ್ ಒಂದು ಚಲಿಸಿದ್ದು ಕೂದಲೆಳೆಯ ಅಂತರದಲ್ಲಿ ಶರತ್ ದೇವಾಡಿಗ ಅವರು ಪ್ರಾಣಾಪಾಯದಿಂದ ಪಾರಾಗಿರು ವುದಾಗಿ ಶರತ್ ದೇವಾಡಿಗ ಅವರು ಜೈ ಕನ್ನಡಮ್ಮ ಪತ್ರಿಕೆಗೆ ತಿಳಿಸಿದ್ದಾರೆ. ಪೊಲೀಸರ ಲಾಠಿ ಪ್ರಹಾರದಿಂದ ಶರತ್ ದೇವಾಡಿಗ ಮತ್ತು ಅವರ ಸ್ನೇಹಿತನ ಮೊಣಕೈ ಮತ್ತು ಕಾಲು ತೀವ್ರ ಜಖಂಗೊಂಡಿದ್ದು ಮೊಬೈಲ್ ಸೆಟ್ ಕೂಡಾ ಹುಡಿಯಾಗಿದೆ. ಹುಟ್ಟೂರು ಮೂಡುಬಿದಿರೆಯ ಶಾಸಕರ ಭರವಸೆಯನ್ನು ನಂಬಿ ಪ್ರಯಾಣ ಪ್ರಾರಂಭಿಸಿದ ತಪ್ಪಿಗೆ ಕರ್ನಾಟಕ ಪೊಲೀಸರಿಂದಲೇ ಲಾಠಿಯೇಟು ತಿಂದು ತೀವ್ರವಾಗಿ ಜರ್ಜರಿತರಾಗಿರುವ ಶರತ್ ದೇವಾಡಿಗ ಪ್ರಯಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇದೀಗ ಮರಳಿ ಪುಣೆ ಸೇರಿದ್ದಾರೆ.






