ಘಟನೆ ನಡೆದು ಮೂರು ದಿನಗಳಾದರೂ ಪ್ರಕರಣ ದಾಖಲಿಸದ ಇಲಾಖೆ ನಡೆಯಲ್ಲಿ ಸಂಶಯ.
ಕೊಕ್ಕಡ:
ಉಪ್ಪಿನಂಗಡಿ ವಲಯಾರಣ್ಯದ ವ್ಯಾಪ್ತಿಯ ಶಿಬಾಜೆ ಸೆಕ್ಷನ್ ನ ಕುರುಂಬು ಎಂಬಲ್ಲಿಂದ ಬೈಕರ ವರೆಗಿನ ಭಾಗದ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಬೆಲೆ ಬಾಳುವ ವಿವಿಧ ಜಾತಿಯ ನೆಡುತೋಪುಗಳ ರೀಪ್ಲಾಂಟೇಶನ್ ನಡೆಸಿ ಬೆಳೆಸಲಾಗಿದ್ದ ಸುಮಾರು 2500 ಮಿಕ್ಕಿ ದಷ್ಟ ಪುಷ್ಟ ಗಿಡಗಳನ್ನ ದುರುದ್ದೇಶಪೂರಿತವಾಗಿ ಕಳೆದ ಮೂರು ದಿನಗಳ ಹಿಂದೆ ದುಷ್ಕರ್ಮಿಗಳು ಕಡಿದು ತುಂಡರಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.
ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಯಾದರೂ ಅರಣ್ಯ ಇಲಾಖೆಯ ಸ್ಥಳೀಯ ಉಪವಲಯಾರಣ್ಯಾಧಿಕಾರಿಯವರಿಗೆ ಈ ಗಂಭೀರ ವಿಷಯವು ಗಮನಕ್ಕೆ ಬಂದಿಲ್ಲವೆನ್ನುವುದು ಸಾರ್ವಜನಿಕರಲ್ಲಿ ದಟ್ಟ ಸಂಶಯವನ್ನುಂಟುಮಾಡಿದೆ.
ಅರಣ್ಯದಲ್ಲಿರುವ ಬೆಲೆ ಬಾಳುವ ಮರಗಳನ್ನು ಈ ಭಾಗದಲ್ಲಿ ಮರಗಳ್ಳರು ಪದೇ ಪದೇ ಕದ್ದು ತುಂಡರಿಸಿ ಕೊಂಡೊಯ್ಯುತ್ತಿದ್ದ ಪ್ರಕರಣಗಳು ಸದಾ ನಡೆಯುತ್ತಲೇ ಇರುವಾಗ ಇದರ ಮಧ್ಯೆ ಲಾಕ್ ಡೌನ್ ಸಮಯದಲ್ಲಿ ಅರಣ್ಯದೊಳಗೆ ನೆಟ್ಟು ಬೆಳೆಸಲಾದ ಸಣ್ಣ ಗಿಡಗಳನ್ನು ಬೆಳೆಯಲು ಬಿಡದೇ ಈ ರೀತಿ ನಾಶ ಪಡಿಸಿರುವುದನ್ನು ಗಮನಿಸಿದಾಗ ಅರಣ್ಯ ಇಲಾಖೆಯ ಕಾರ್ಯ ವೈಖರಿಗಳ ಬಗ್ಗೆಯೇ ಇದೀಗ ಸಾರ್ವಜನಿಕರು ಬೆರಳು ತೋರಿಸಿ ಬೊಟ್ಟು ಮಾಡಿದಂತಾಗಿದೆ ಈ ಘಟನೆ.
ಅರಣ್ಯ ಇಲಾಖಾಧಿಕಾರಿಗಳ ವ್ಯತಿರಿಕ್ತ ಹೇಳಿಕೆಯಲ್ಲೇ ಸಂಶಯ ;
ಘಟನೆ ನಡೆದು ಮೂರು ದಿನಗಳಾಗಿದೆಯಾದರೂ ಈ ಘಟನೆ ಕುರಿತು ಶಿಬಾಜೆ ಉಪವಲಯಾರಣ್ಯಾಧಿಕಾರಿಯವರಲ್ಲಿ ಮಾಹಿತಿ ಕೇಳಿದಾಗ ತಾವು ಅರಣ್ಯ ಭಾಗದಲ್ಲಿ ಹೊಸ ಪ್ಲಾಂಟೇಶನ್ ಗಳನ್ನು ಈಗ ನಡೆಸುತ್ತಿರುವ ಕಾರ್ಯದಲ್ಲಿ ಕಳೆದ ಒಂದು ವಾರದಿಂದ ಬ್ಯುಸಿ ಇರುವುದಾಗಿ ಹೇಳಿಕೆ ನೀಡಿದರಲ್ಲದೇ ಈ ಗಿಡಗಳನ್ನು ನಾಶ ಪಡಿಸಿರುವ ಘಟನೆಯ ಕುರಿತು ತಮಗೆ ಮಾಹಿತಿಯೇ ಇರುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳೀಯ ಅರಣ್ಯ ವೀಕ್ಷಕ ರನ್ನ ಸಂಪರ್ಕಿಸಲಾಗಿ ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿರುವುದು ಹೌದು ಎಂದು ಈ ಬಗ್ಗೆ ಆತ ಹೇಳಿಕೆ ನೀಡಿದ್ದಾರೆ.ಮಾತ್ರವಲ್ಲ ಈ ಕುರಿತಂತೆ ಸ್ಥಳೀಯ ದೇವಸ್ಥಾನದಲ್ಲಿ ಈ ಭಾಗದ ಜನರು ಮತ್ತು ಅರಣ್ಯಾಧಿಕಾರಿಗಳು ತೆರಳಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಯಾಗಲಿ ಎಂದು ಸಾರ್ವಜನಿಕ ಪ್ರಾರ್ಥನೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಈ ಘಟನೆ ನಡೆದು ಮೂರು ದಿನಗಳಾದರೂ ಈ ಕುರಿತಂತೆ ಅರಣ್ಯ ಇಲಾಖೆ ಪ್ರಕರಣವನ್ನ ಸ್ವಯಂ ಪ್ರೇರಿತವಾಗಿ ದಾಖಲಿಸದೇ ಇರುವುದನ್ನು ಗಮನಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆಯೇ ಸಾರ್ವಜನಿಕರು ಸಂಶಯ ಪಡುವಂತಾಗಿದೆ.
ಪ್ರಕರಣದ ತನಿಖೆ ತಿರುಚಲು ಯತ್ನ :
ಮೀಸಲು ರಕ್ಷಿತಾರಣ್ಯದೊಳಗೆ ಇಷ್ಟು ದೊಡ್ಡ ಪ್ರಮಾಣದ ಅನಾಹುತಗಳು ನಡೆಯುತ್ತಿದ್ದರೂ ಇಂತಹ ಗಂಭೀರ ಪ್ರಕರಣಗಳ ಕುರಿತು ಅರಣ್ಯ ಇಲಾಖೆ ಸೂಕ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಮಾಡುವುದನ್ನು ಬಿಟ್ಟು ಈ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ದೇವರ ಮೊರೆ ಹೋಗಿ ಕೈತೊಳೆಯುವುದಾದಲ್ಲಿ ಸಂಬಂದ ಪಟ್ಟ ಇಲಾಖೆ ಇರುವುದಾದರೂ ಯಾತಕ್ಕಾಗಿ ಎನ್ನುವುದು ಸಾರ್ವಜನಿಕರಲ್ಲಿ ಮೂಡುತ್ತಿರುವ ಯಕ್ಷಪ್ರಶ್ನೆಯಾಗಿದೆ.
ಕಲಂ 3 ; ಹಕ್ಕುಪತ್ರಗಳನ್ನು ಅಕ್ರಮ ಮಂಜೂರು ಮಾಡಿಸಿದ ಪ್ರಕರಣದ ಮೇಲೂ ಸಂಶಯದ ಹೊಗೆ;
ಈ ಭಾಗದ ರಕ್ಷಿತಾರಣ್ಯದ ನೆಡುತೋಪುಗಳನ್ನು ನಡೆಸಲಾದ ಸ್ಥಳಕ್ಕೆ ಹೊಂದಿಕೊಂಡಂತೆ ಹಲವಾರು ಜನರಿಗೆ ಅರಣ್ಯ ಭೂಮಿ ಮತ್ತು ಸರಕಾರಿ ಭೂಮಿಗಳನ್ನು ಅಕ್ರಮ ಸಕ್ರಮದ ಭೋಗಸ್ ದಾಖಲೆಗಳನ್ನೇ ಸೃಷ್ಟಿ ಮಾಡಿ ಸ್ಥಳೀಯ ಪ್ರಭಾವಿ ವ್ಯಕ್ತಿ ಯೋರ್ವ ಮಂಜೂರು ಮಾಡಿಸಿರುವ ಪ್ರಕರಣವೊಂದು ಇದೀಗ ಬೆಳ್ತಂಗಡಿ ತಹಶೀಲ್ದಾರ್ ರವರ ಗಮನಕ್ಕೆ ಬಂದಿದ್ದು ಬೆಳ್ತಂಗಡಿ ಆರಕ್ಷಕ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿರುತ್ತದೆ. ಕಂದಾಯ ಇಲಾಖೆ ಈ ಅನಧಿಕೃತ ಬೇನಾಮಿ ವ್ಯವಹಾರಗಳ ಬಗ್ಗೆ ಈಗಾಗಲೇ ದೂರು ದಾಖಲಿಸಿಕೊಂಡು ಸಂಬಂದ ಪಟ್ಟ ಎಲ್ಲಾ ಕಡತಗಳನ್ನೂ ತನಿಖೆ ನಡೆಸುತ್ತಿದೆ. ಇಲ್ಲಿ ಹಣವುಳ್ಳವರು ಈ ಪ್ರಕರಣದ ಆರೋಪಿಯ ಮೂಲಕ ಬೇನಾಮಿ ದಾಖಲೆ ಸೃಷ್ಟಿಸಿಕೊಂಡು ಸ್ಥಳವನ್ನ ತಮ್ಮ ಹೆಸರಿಗೆ ಹಕ್ಕುಪತ್ರ ಮಾಡಿಸಿಕೊಂಡಿರುವುದು ಒಂದು ವಿಷಯವಾದರೆ ಇಲ್ಲಿ ತಲತಲಾಂತರಗಳಿಂದ ಸ್ಥಳದಲ್ಲೇ ವಾಸವಿದ್ದ ಹತ್ತಾರು ಬಡಕುಟುಂಬಗಳು ಅರಣ್ಯ ಇಲಾಖೆಯ ಒಪ್ಪಿಗೆ ಸಿಗದಿರುವ ಕಾರಣದಿಂದ ಇನ್ನೂ ತಮ್ಮ ಸ್ಥಳಗಳಿಗೆ ಸೂಕ್ತ ಹಕ್ಕುಪತ್ರವನ್ನು ಪಡೆಯುವಲ್ಲಿ ವಂಚಿತರಾಗಿ ಅಸಮಾಧಾನಗೊಂಡಿರುವುದು ತಿಳಿದು ಬರುತ್ತಿದೆ. ಅರಣ್ಯ ಇಲಾಖೆಯ ಬಫರ್ ಪ್ರದೇಶದ ಸ್ಥಳಗಳು ಹಣವುಳ್ಳವರ ಹೆಸರಿಗೆ ಅನಧಿಕೃತ ದಾಖಲೆ ಸೃಷ್ಟಿಯಾಗಿದೆ. ಅರ್ಹರಿಗೆ ಇನ್ನೂ ಸಿಗದೇ ಉಳಿದಿದೆ ಎನ್ನುವ ಈ ಸ್ಥಳದ ಜನರೊಳಗಿನ ಗೊಂದಲ ಮತ್ತು ಅಸಹನೆಗಳು ಕಟ್ಟೆಯೊಡೆದಿದ್ದು ಇದೀಗ ಅರಣ್ಯ ಪ್ರದೇಶದಲ್ಲಿ ನೆಟ್ಟು ಬೆಳೆಸಲಾದ ಸಾವಿರಾರು ಮರಗಳನ್ನು ಮಾರಣ ಹೋಮ ನಡೆಸಿ ಯಶಸ್ವಿಯಾಗಿದೆ ಎನ್ನುವುದು ವಾಸ್ತವ ಎನ್ನುವುದು ಸ್ಥಳೀಯರ ಊಹೆಯಾಗಿದೆ.
ಉನ್ನತ ಮಟ್ಟದ ತನಿಖೆಯಾಗಲಿ :
ಅರಣ್ಯ ಇಲಾಖೆ ನೆಟ್ಟು ಬೆಳೆಸಿದ ಸಾವಿರಾರು ಮರಗಿಡಗಳನ್ನ ನಾಶಮಾಡಿದ ಮತ್ತು ಅರಣ್ಯ ಇಲಾಖೆಗೆ ಸೇರಿದ ಬಫರ್ ಸ್ಥಳಗಳನ್ನು ಬೇನಾಮಿ ದಾಖಲೆ ಮೂಲಕ ಅತಿಕ್ರಮಿಸಿಕೊಂಡ ಇಷ್ಟು ದೊಡ್ಡ ಗಂಭೀರ ಪ್ರಕರಣಗಳ ಮೇಲೂ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಂದ ಸೂಕ್ತ ತನಿಖೆ ಯಾಗಿ ಸಂಬಂದ ಪಟ್ಟ ಆರೋಪಿಗಳ ಮೇಲೆ ತಕ್ಕ ಕ್ರಮ ಕೈಗೊಳ್ಳಬೇಕೆನ್ನುವುದು ಸ್ಥಳೀಯರ ಬಲವಾದ ಆಗ್ರಹವಾಗಿದೆ.






