ಕಡಂದಲೆ ಆತ್ಮಹತ್ಯೆ ಪ್ರಕರಣದ ನಂತರ ಮೂಡುಬಿದಿರೆಯಲ್ಲಿ ಆವರಿಸಿದೆ ಕೊರೋನಾ ಭೀತಿ

Facebook
Twitter
LinkedIn
WhatsApp

ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳೀಯರನೇಕರ ಭೇಟಿ ಹೆಚ್ಚಿಸಿದ ಆತಂಕ

ಮೂಡುಬಿದಿರೆ : ಮುಂಬಯಿಯಿಂದ ಕಡಂದಲೆಗೆ ಆಗಮಿಸಿದ್ದ ಹೋಟೆಲ್ ಉದ್ಯೋಗಿ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾದ ಕೆಲವೇ ಗಂಟೆಗಳ ಬಳಿಕ ಶಾಲೆಯ ವರಾಂಡದಲ್ಲಿ ನೇಣಿಗೆ ಶರಣಾದ ಪ್ರಕರಣ ಇದೀಗ ಮೂಡುಬಿದಿರೆ ಪರಿಸರದಲ್ಲಿ ತೀವ್ರ ಭೀತಿಯ ಅಲೆಯೆಬ್ಬಿಸಿದೆ.
ಮೇ. ,20ರಂದು ತಡರಾತ್ರಿ ಮುಂಬಯಿಯಿಂದ ತನ್ನ ಇತರ 6 ಮಂದಿ ಸಂಬಂಧಿಕರ ಜೊತೆಗೆ ಕಡಂದಲೆಗೆ ಆಗಮಿಸಿದ್ದ ಸ್ಥಳೀಯ ನಿವಾಸಿ ಮುಂಬಯಿಯ ಹೋಟೆಲ್ ಕಾರ್ಮಿಕ ಕ್ವಾರಂಟೈನ್ ಗೆ ಒಳಪಟ್ಟ ಕೆಲವೇ ಗಂಟೆಗಳ ನಂತರ ನೇಣಿಗೆ ಶರಣಾಗಿದ್ದರು. ನಂತರ ಅವರ ಮೃತದೇಹದ ಸಮಗ್ರ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೋನಾ ಇದ್ದುದು ದೃಢಪಟ್ಟಿತ್ತು. ಈ ವರದಿ ಹೊರಬಿದ್ದ ನಂತರ ಮೂಡುಬಿದಿರೆಯ ನಾಗರಿಕರಲ್ಲಿ ಒಂದು ರೀತಿಯ ಟೆನ್ಶನ್ ಸೃಷ್ಟಿಸಿದೆ.
ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಮರುದಿನ ಮುಂಜಾನೆ ಸ್ಥಳಿಯರಿಗೆ ಗೊತ್ತಾಗಿದೆ. ಈ ಸಂದರ್ಭ ತೀವ್ರ ಕುತೂಹಲಕ್ಕೆ ಒಳಗಾದ ಸ್ಥಳೀಯ ಕೆಲವು ಜನಪ್ರತಿನಿಧಿಗಳ ಸಹಿತ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ಇತರ ಕೆಲವು ಗ್ರಾಮಸ್ಥರು ವಿವೇಚನೆಯನ್ನೂ ಮರೆತು ಶಾಲಾ ವಠಾರ ಪ್ರವೇಶಿಸಿದ್ದಾರೆ. ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುವ ಮೊದಲೇ ಇಲ್ಲಿ ಜಮಾಯಿಸಿದ್ದ ಕೆಲವು ಮಂದಿ ಮೃತದೇಹದ ಸಮೀಪ ಹೋಗಿದ್ದಾರೆ. ಕೆಲವರು ಕ್ವಾರಂಟೈನ್ ಕೊಠಡಿಯನ್ನೂ ಪ್ರವೇಶಿಸಿ ಮೃತರ ಜೊತೆಗೆ ಮುಂಬಯಿ ಯಿಂದ ಪ್ರಯಾಣಿಸಿದ್ದ ಇತರರ ಜೊತೆಗೆ ಮಾತುಕತೆಯನ್ನೂ ನಡೆಸಿರುವ ಬಗ್ಗೆ ಜನರಾಡಿಕೊಳ್ಳುತ್ತಿದ್ದಾರೆ. ಈಗ ಇವರೆಲ್ಲಾ ನಿರ್ಭೀತಿಯಿಂದ ಊರೆಲ್ಲಾ ಸುತ್ತುತ್ತಿದ್ದು ಸಮುದಾಯ ಮಟ್ಟದಲ್ಲಿ ಕೊರೋನಾ ವ್ಯಾಪಿಸುವ ಭೀತಿ ಸಾರ್ವಜನಿಕರಲ್ಲಿ ವ್ಯಾಪಿಸಿದೆ.
ಇಲ್ಲಿಗೆ ಹೋಗಿದ್ದ ಕೆಲವು ಪೊಲೀಸರು ಸೆಲ್ಫ್ ಕ್ವಾರಂಟೈನ್ ಸ್ವೀಕರಿಸಿದ್ದಾರೆಂದು ಪತ್ರಿಕೆಯಲ್ಲಿ ವರದಿಯಾಗಿದ್ದು ಮೂಡುಬಿದಿರೆಯ ತಹಶೀಲ್ದಾರ್ ಕೂಡಾ ಸಾರ್ವಜನಿಕರಿಂದ ಆದಷ್ಟು ದೂರವೇ ಉಳಿದಿದ್ದಾರೆ.
ಮೃತರ ಸಹೋದರ ಪಾಲಡ್ಕ ಪಂಚಾಯತ್ ಸದಸ್ಯರನ್ನು ಸಧ್ಯ ಕ್ವಾರಂಟೈನ್ ಮಾಡಲಾಗಿದ್ದು ಇಲ್ಲಿ ಪ್ರವೇಶ ಮಾಡಿದ್ದ ಇತರ ಕೆಲವರು ಎಲ್ಲೆಂದರಲ್ಲಿ ಸುತ್ತಾಡುತ್ತಿರುವುದು ಕಡಂದಲೆಯಿಂದ ಮೂಡುಬಿದಿರೆ ವರೆಗೂ ಆತಂಕ ಹೆಚ್ಚಲು ಕಾರಣ ವಾಗಿದೆ. ಆಡಳಿತ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಂಡು ಜನರ ಆತಂಕವನ್ನು ದೂರ ಮಾಡಬೇಕಾಗಿದೆ.
ಪಾಲಡ್ಕ ಗ್ರಾಮದ ವರ್ಣಬೆಟ್ಟು ಶಾಲೆಯಲ್ಲಿ ಕೂಡಾ ಮುಂಬಯಿ ವಲಸಿಗರನ್ನು ಕ್ವಾರಂಟೈನ್ ಮಾಡಲಾಗಿದ್ದು ಇಲ್ಲಿಯೂ ಕೆಲವು ಜನಪ್ರತಿನಿಧಿಗಳು ಮತ್ತು ವಲಸಿಗರ ಸಂಬಂಧಿಗಳು ಕ್ವಾರಂಟೈನ್ ಕೊಠಡಿ ಪ್ರವೇಶಿಸಿ ತಾಸುಗಟ್ಟಲೆ ಹರಟೆ ಹೊಡೆಯುವ ಕಾರ್ಯ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಆತಂಕ ಸೃಷ್ಟಿಸಿದೆ.
ತನ್ಮಧ್ಯೆ ಪುತ್ತಿಗೆ ಗ್ರಾಮದ ಕಡಲಕೆರೆ ಪರಿಸರದ ಒಂಟಿ ಮನೆಯಲ್ಲಿ ಮೂರು ಮಂದಿ ಅಪರಿಚಿತರು ತಂಗಿರುವ ವಿಚಾರ ಸ್ಥಳೀಯರನ್ನು ಗಾಬರಿ ಬೀಳುವಂತೆ ಮಾಡಿದೆ. ಈ ಮನೆಯ ಮಾಲಕರು ವಿದೇಶದಲ್ಲಿದ್ದು, ಈ ಮನೆಯನ್ನು ನೋಡಿಕೊಳ್ಳುವ ಮಾಲಕರ ಸಂಬಂಧಿಯೊಬ್ಬರ ನೆರವನ್ನು ಪಡೆದ ಮೂರು ಮಂದಿ ಯುವಕರು ಕಳೆದ ಎರಡು ದಿನಗಳಿಂದ ಈ ಮನೆಯಲ್ಲಿ ತಂಗಿದ್ದರು. ಸ್ಥಳಿಯರಿಂದ ಮಾಹಿತಿ ಪಡೆದ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೇರಳ, ಪೀಣ್ಯ ಮತ್ತು ಬಂಟ್ವಾಳದ ಆಧಾರ್ ಕಾರ್ಡ್ ಇವರು ಹೊಂದಿರುವುದು ಪತ್ತೆಯಾಗಿದೆ. ಈ ಮೂವರು ಅಕ್ರಮವಾಗಿ ಮುಂಬೈ ಯಿಂದ ಕರ್ನಾಟಕ ಗಡಿ ಪ್ರವೇಶಿಸಿರ ಬಹುದು ಎಂಬ ಶಂಕೆ ಇದೆ.

ಶಂಕಿತರು ಪರಾರಿ

ಪುತ್ತಿಗೆ ಗ್ರಾಮದ ಕಡಲಕೆರೆ ಪರಿಸರದ ಒಂಟಿ ಮನೆಯಲ್ಲಿ ಮೇ 26ರಂದು ಪತ್ತೆಯಾಗಿದ್ದ ಮೂವರು ಅಪರಿಚಿತ ಯುವಕರು ಪೊಲೀಸ್ ತನಿಖೆಗೆ ಹೆದರಿ ರಾತ್ರೋ ರಾತ್ರಿ ಪರಾರಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಕಡಲಕೆರೆಯ ಈ ಒಂಟಿ ಮನೆಯಲ್ಲಿ ಮೂವರು ಅಪರಿಚಿತ ಯುವಕರು ಕಳೆದೆರಡು ದಿನಗಳಿಂದ ತಂಗಿದ್ದರೆಂದು ಹೇಳಲಾಗುತ್ತಿದೆ. ಇದರಿಂದ ಆತಂಕಕ್ಕೊಳಗಾದ ಸ್ಥಳೀಯರು ಕೋವಿಡ್-೧೯ ಸ್ಕ್ವಾಡ್ ಗೆ ದೂರನ್ನು ನೀಡಿದ್ದರು. ಮೇ 26ರಂದು ಸಂಜೆ 7 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಕರಣಿಕ ಗೋಪಾಲ ಅವರು ಈ ಅಪರಿಚಿತ ಯುವಕರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಈ ಮೂವರೂ ಪರಸ್ಪರ ತಾಳೆಯಾಗದ ಉತ್ತರ ನೀಡಿದ್ದರೆಂದು ತಿಳಿದು ಬಂದಿದೆ. ಈ ಮೂವರ ಪೈಕಿ ಒಬ್ಬನಲ್ಲಿ ಕೇರಳದ, ಇನ್ನೊಬ್ಬನಲ್ಲಿ ಬೆಂಗಳೂರು ಪೀಣ್ಯದ ಮತ್ತು ಮತ್ತೊಬ್ಬನಲ್ಲಿ ಬಂಟ್ವಾಳದ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಆರೋಪಿಗಳು ಓಡಾಡುತ್ತಿದ್ದ ಕೆ ಎ19 ನೋಂದಾವಣೆಯ ಕಾರು ಕೂಡಾ ಅಲ್ಲಿತ್ತು. ಮೇ27ರ ಮುಂಜಾನೆ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅದಾಗಲೇ ಮನೆ ಖಾಲಿಯಾಗಿತ್ತು. ತನಿಖೆಗೆ ಹೆದರಿದ ಮೂವರು ಶಂಕಿತ ಯುವಕರು ರಾತ್ರಿಯೇ ಮನೆ ಖಾಲಿ ಮಾಡಿ ಪರಾರಿಯಾಗಿದ್ದಾರೆ. ಈ ಮೂವರೂ ಮುಂಬಯಿಯಿಂದ ಅಕ್ರಮವಾಗಿ ಕರ್ನಾಟಕ ಪ್ರವೇಶಿಸಿದ ವಲಸಿಗರಿರ ಬಹುದು ಎಂಬ ಶಂಕೆಯಿದೆ. ಅವರು ಬಳಸಿರುವ ಶಿಫ್ಟ್ ಕಾರು ಅಥವಾ ಅವರಿಗೆ ಇಲ್ಲಿ ತಂಗಲು ಅವಕಾಶ ಮಾಡಿಕೊಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಿ ತನಿಖೆ ನಡೆಸಿದರೆ ಈ ಅಪರಿಚಿತ ಯುವಕರು ಇಲ್ಲಿ ಯಾಕೆ ತಂಗಿದ್ದರು ಎಂಬ ಅಂಶ ಬೆಳಕಿಗೆ ಬರಲು ಸಾಧ್ಯ ಎಂದು ಸ್ಥಳೀಯ ಆತಂಕಿತ ನಾಗರಿಕರು ಹೇಳುತ್ತಿದ್ದಾರೆ.

Latest News

Related Posts