ಮೂಡುಬಿದಿರೆಯಲ್ಲಿ 7 ಕೊರೋನಾ ಪಾಸಿಟಿವ್
ಮೂಡುಬಿದಿರೆ: ಮೇ 29, ಮೂಡುಬಿದಿರೆಯ ಪಾಲಿಗೆ ಕರಾಳ ದಿನ ಎಂದರೂ ತಪ್ಪಾಗಲಾರದು. ಮೂಡುಬಿದಿರೆಯಲ್ಲೂ ಕೊರೋನಾ ಪಾಸಿಟಿವ್ ಅಭಿಯಾನಕ್ಕೆ ಚಾಲನೆ ಸಿಕ್ಕಂತಾಗಿದೆ. ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದ ಕೊರೋನಾ ಪಾಸಿಟಿವ್ ವ್ಯಕ್ತಿಯ ಜೊತೆಗೆ ಮುಂಬೈಯಿಂದ ಆಗಮಿಸಿದ್ದ ಇತರ ಎಲ್ಲಾ 6 ಮಂದಿಯ ಸ್ಲ್ಯಾಬ್ ರಿಪೋರ್ಟಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ ಎಂದು ಗೊತ್ತಾಗಿದೆ. ಇದೀಗ ಕಡಂದಲೆ ಕ್ವಾರಂಟೈನ್ ಸೆಂಟರಿನಲ್ಲಿ ಕೊರೋನಾ ಸೋಂಕಿತ ಸಾವಿಗೆ ಶರಣಾದ ವೇಳೆ ಪೊಲೀಸರು ಬರುವ ಮೊದಲೇ ಕಡಂದಲೆ ಶಾಲೆಗೆ ಭೇಟಿ ನೀಡಿದ ಮೃತನ ಸಂಬಂಧಿಕರು, ಸ್ನೇಹಿತರು, ಜನಪ್ರತಿನಿಧಿಗಳು ಹಾಗೂ ಕೆಲವು ಕುತೂಹಲಿಗಳ ಎದೆಯಲ್ಲೂ ಢವಢವ ಸುರುವಾಗಿದೆ. ಕಡಂದಲೆ ಶಾಲೆಯಲ್ಲಿ ಕ್ವಾರಂಟೈನಿನಲ್ಲಿದ್ದ 6ಮಂದಿಯನ್ನ ಮತ್ತು ಇಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದ ಇತರ ಇಬ್ಬರನ್ನು ಸುರತ್ಕಲ್ ನ ಎನ್.ಐ.ಟಿ.ಕೆ.ಗೆ ಶಿಫ್ಟ್ ಮಾಡಲಾಗಿತ್ತು. ಮೇ 29ರ ಸಂಜೆ ಈ ಪೈಕಿ ಆತ್ಮಹತ್ಯೆಗೈದಿದ್ದ ವ್ಯಕ್ತಿಯ ಜೊತೆಗೆ ಮುಂಬೈಯಿಂದ ಪ್ರಯಾಣಿಸಿದ್ದ ಎಲ್ಲಾ 6 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಡಂದಲೆಯಿಂದ ಎನ್.ಐ.ಟಿ.ಕೆ.ಗೆ ಶಿಪ್ಟ್ ಆಗಿದ್ದ ಇತರ ಇಬ್ಬರನ್ನು ಎನ್.ಐ.ಟಿ.ಕೆ.ಯಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೊಂದು ಪ್ರಕರಣ ಇರುವೈಲಿನಲ್ಲಿ
ಇರುವೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಬೈಯಿಂದ ಬಂದಿದ್ದ 5 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಒಬ್ಬನ ಸ್ಲ್ಯಾಬ್ ರಿಪೋರ್ಟ್ ಪಾಸಿಟಿವ್ ಬಂದಿದ್ದು ಆತನನ್ನು ಇಂದು ಮಧ್ಯಾಹ್ನವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ಶಾಲೆಯಲ್ಲಿ ಉಳಿದಿದ್ದ ಇತರ ನಾಲ್ವರನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೋಂ ಕ್ವಾರಂಟೈನಿಗೆ ಒಳಪಡಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.







