ಶಾಸಕ ಹರೀಶ್ ಪೂಂಜಾ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ
ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕ ಅಂತರ ಕಾಪಾಡುವ ಉದ್ಧೇಶದಿಂದ ಪ್ರತೀ ಸೋಮವಾರ ನಡೆಯುವ ಬೆಳ್ತಂಗಡಿಯ ವಾರದ ಸಂತೆಯನ್ನು ಶಾಸಕ ಹರೀಶ್ ಪೂಂಜಾರ ಸೂಚನೆಯಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಳೆಕೋಟೆಯ ಎ.ಪಿ.ಎಂ.ಸಿ. ಯಾರ್ಡಿಗೆ ತಾತ್ಕಾಲಿಕವಾಗಿ ಈ ಹಿಂದೆ ಸ್ಥಳಾಂತರಿಸಲಾಗಿತ್ತು. ಇದೀಗ ಜೂನ್ 1ರಂದು ಬೆಳ್ತಂಗಡಿಯ ಎ.ಪಿ.ಎಂ.ಸಿ.ಯ ಸಭಾಂಗಣದಲ್ಲಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿಯ ವಾರದ ಸಂತೆಯನ್ನು ಖಾಯಂ ಆಗಿ ಎ.ಪಿ.ಎಂ.ಸಿ. ಯಾರ್ಡಿನಲ್ಲಿಯೇ ನಡೆಸಲು ತೀರ್ಮಾನಿಸಲಾಯಿತು.
ಸರಕಾರ ಕೊರೋನಾ ಸೋಂಕು ತಡೆಗೆ ಮುಂಜಾಗ್ರತೆಯಾಗಿ ಸುರಕ್ಷತಾ ಕ್ರಮ ಕೈಗೊಳ್ಳಲು ಜನತೆಗೆ ತಿಳುವಳಿಕೆ ನೀಡಲು ಲಾಕ್ ಡೌನಿಗೆ ಮೊರೆ ಹೋದರೂ; ಇದೀಗ ಹಂತಹಂತವಾಗಿ ಲಾಕ್ ಡೌನನ್ನು ಸಡಿಲಗೊಳಿಸುತ್ತಿದೆ. ಆದರೂ ಕೊರೋನಾ ಸೋಂಕು ತನ್ನ ಪಾಡಿಗೆ ಹರಡುತ್ತಿರುವುದರಿಂದ, ಜನತೆ ಸೋಂಕು ಹರಡದಂತೆ ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಾಗಿರುವುದರಿಂದ; ಕೃಷಿಕರು-ವ್ಯಾಪಾರಸ್ಥರು ಹಾಗೂ ಗ್ರಾಹಕರ ನಡುವೆ ವೈಯಕ್ತಿಕ ಅಂತರ ಕಾಪಾಡಲು ಅವಕಾಶವಾಗಲಿ ಎಂಬ ಉದ್ಧೇಶದಿಂದ ಸಾಕಷ್ಟು ಸ್ಥಳಾವಕಾಶವಿರುವ ಎ.ಪಿ.ಎಂ.ಸಿ. ಯಾರ್ಡಿನಲ್ಲಿ ವಾರದ ಸಂತೆಯನ್ನು ಖಾಯಂ ಆಗಿ ನಡೆಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಪಿ. ಬೆಳಾಲು, ಉಪಾಧ್ಯಕ್ಷ ಅಬ್ದುಲ್ ಗಫೂರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗ, ಎ.ಪಿ.ಎಂ.ಸಿ. ಕಾರ್ಯದರ್ಶಿ ರವೀಂದ್ರ, ಸದಸ್ಯರಾದ ಈಶ್ವರ ಭೈರ, ಅಶೋಕ್ ಗೋವಿಯಸ್, ಚಿದಾನಂದ ಎಲ್ದಕ್ಕ ಮತ್ತಿತರರು ಭಾಗವಹಿಸಿದ್ದರು.
ಈ ನಡುವೆ ಎ.ಪಿ.ಎಂ.ಸಿ. ವತಿಯಿಂದ ವಾರದ ಇನ್ನೊಂದು ದಿನ ಸಂತೆ ನಡೆಸುವ ಬಗ್ಗೆ ಚಿಂತನೆ ನಡೆದಿದ್ದು, ಈ ಬಗ್ಗೆ ತೀರ್ಮಾನಿಸಿ ಮುಂದುವರಿಯಲು ಎ.ಪಿ.ಎಂ.ಸಿ. ಆಡಳಿತ ಸಮಿತಿಗೆ ಅಧಿಕಾರ ನೀಡಲಾಯಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರದ ವಾರದ ಸಂತೆಯೊಂದಿಗೆ ಗುರುವಾರ ಮತ್ತೊಂದು ದಿನ ಸಂತೆ ನಡೆಯುವ ಸಾಧ್ಯತೆ ಇದೆ.






