ಕಳೆದ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಇಟಲಿ ಹಾಗೂ ಜರ್ಮನಿ ಪ್ರವಾಸ ಕೈಗೊಂಡಿದ್ದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಲಾರೆನ್ಸ್ ಮುಕ್ಕುಯಿ, ನಂತರ ಕೊರೋನಾ ಸೋಂಕು ತಡೆಗೆ ಮುಂಜಾಗ್ರತೆಗಾಗಿ ಭಾರತ ಸರಕಾರ ದೇಶದಲ್ಲಿ ಲಾಕ್ ಡೌನಿಗೆ ಕರೆ ನೀಡುವುದರ ಜೊತೆಗೆ ಅಂತರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಜರ್ಮನಿಯಲ್ಲಿಯೇ ವಾಸ್ತವ್ಯ ಮುಂದುವರಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು. ಇದೀಗ ದೇಶದಲ್ಲಿ ಲಾಕ್ ಡೌನ್ ನಿಯಮ ಸಡಿಲಗೊಂಡು, ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೂ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದ್ದರಿಂದ; ಇದುವರೆಗೆ ಜರ್ಮನಿಯಲ್ಲಿದ್ದ ಬಿಷಪ್ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಕಳೆದ ವಾರ ಬೆಂಗಳೂರಿಗೆ ಆಗಮಿಸಿ, ಸರಕಾರದ ನಿಯಮದಂತೆ ಬೆಂಗಳೂರಿನ ಹೊಟೇಲಿನಲ್ಲಿ 7ದಿನಗಳ ಕ್ವಾರಂಟೈನನ್ನು ಪೂರೈಸಿ, ಜೂನ್ 6ರ ರಾತ್ರಿ ಬೆಳ್ತಂಗಡಿಯ ಉದಯನಗರ ದಲ್ಲಿರುವ ಬಿಷಪ್ ಹೌಸಿಗೆ ಮರಳಿದರು. ಇದೀಗ ಸರಕಾರಿ ನಿಯಮದಂತೆ ಬಿಷಪ್ ಲಾರೆನ್ಸ್ ಮುಕ್ಕುಯಿಯವರು ಬಿಷಪ್ ಹೌಸಿನಲ್ಲಿಯೇ 14ದಿನಗಳ ಹೋಂ ಕ್ವಾರಂಟೈನಿಗೆ ತಮ್ಮನ್ನು ಒಳಗಾಗಿಸಿಕೊಳ್ಳಲಿದ್ದಾರೆ.

ದೇಶ ಮಾತ್ರವಲ್ಲ, ಇಡೀ ವಿಶ್ವವೇ ಕೊರೋನಾ ಹೆಮ್ಮಾರಿಯಿಂದ ಮುಕ್ತವಾಗಿ ಎಲ್ಲರೂ ಸಹೋದರತೆಯಿಂದ ಬಾಳುವ ವಾತಾವರಣ ಸೃಷ್ಟಿಯಾಗಲಿ ಎಂದು ಬಿಷಪ್ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಪ್ರಭು ಏಸುಕ್ರಿಸ್ತರಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.






