ವೇಣೂರು: ವೇಣೂರು ಗ್ರಾಮ ಪಂಚಾಯತಿನ ಅಧ್ಯಕ್ಷೆ ಬಿಜೆಪಿ ಬೆಂಬಲಿತ ಮೋಹಿನಿ ಶೆಟ್ಟಿಯವರ ವಿರುದ್ಧ ಬಿಜೆಪಿ ಬೆಂಬಲಿತ ಹಾಗೂ ಕಾಂಗ್ರೇಸ್ ಬೆಂಬಲಿತ ಒಂದು ಬಣದ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯವು ಜೂನ್ 9ರಂದು ವೇಣೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಿರ್ಣಾಯಕ ಹಂತ ತಲುಪಿತ್ತು. ಪುತ್ತೂರಿನ ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಯತೀಶ್ ಉಲ್ಲಾಳರ ಉಪಸ್ಥಿತಿಯಲ್ಲಿ ಇಂದು ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ 14ಸದಸ್ಯರ ಪೈಕಿ 13ಮಂದಿ ಹಾಗೂ ಕಾಂಗ್ರೇಸ್ ಬೆಂಬಲಿತ 10ಸದಸ್ಯರ ಪೈಕಿ 4ಮಂದಿ ಹಾಜರಾಗಿದ್ದರು. ಕಾಂಗ್ರೇಸ್ ಬೆಂಬಲಿತ 6ಮಂದಿ ಸದಸ್ಯರು ಸಭೆಗೆ ಗೈರುಹಾಜರಾಗುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಪರೋಕ್ಷ ಬೆಂಬಲ ನೀಡಿದ್ದರು. ಅವಿಶ್ವಾಸ ನಿರ್ಣಯ ಯಾವುದೇ ವಿರೋಧವಿಲ್ಲದೇ, ಮತದಾನ ನಡೆಯದೇ ಸರ್ವಾನುಮತದಿಂದ ಅಂಗೀಕಾರಗೊಂಡಿತು.






