ಯೋಗದಿಂದ ನೆಮ್ಮದಿಯ ಬದುಕು-ಡಾl ಪ್ರಶಾಂತ್ ಶೆಟ್ಟಿ
ಬೆಳ್ತಂಗಡಿ: ಕಳೆದ 5 ವರ್ಷಗಳಿಂದ ವಿಶ್ವ ಯೋಗ ದಿನವನ್ನು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾರತ ಸರಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಸಂಘಸಂಸ್ಥೆಗಳ ಸದಸ್ಯರನ್ನು ತರಬೇತುಗೊಳಿಸಿ, ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಿದ್ದೆವು. ಕೊರೋನಾ ಸೋಂಕಿನ ಭೀತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕಾದ್ದರಿಂದ ಬದಲಾದ ಪರಿಸ್ಥಿತಿಯಲ್ಲಿ ಭಾರತ ಸರಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ‘ನನ್ನ ಜೀವನ-ಯೋಗ ಜೀವನ ಹಾಗೂ ಮನೆಯೇ ಮೊದಲ ಯೋಗ ಚಾವಡಿ’ ಎಂಬ ಪರಿಕಲ್ಪನೆಯಡಿಯಲ್ಲಿ ಈ ಬಾರಿಯ ಯೋಗ ದಿನಾಚರಣೆಯನ್ನು ಮನೆಮನೆಗಳಲ್ಲಿ ಆಚರಿಸಲಾಗುತ್ತಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾl ಪ್ರಶಾಂತ್ ಶೆಟ್ಟಿ ಹೇಳಿದರು.
ಅವರು ಜೂನ್ 21ರಂದು ಉಜಿರೆಯ ಅತ್ತಾಜೆ ಕೇಶವ ಭಟ್ಟರ ಮನೆಯಲ್ಲಿ ನಡೆದ 6ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ದಿನದ ಮಹತ್ವದ ಕುರಿತು ಮಾತನಾಡುತ್ತಿದ್ದರು.
ನಮ್ಮ ಶರೀರ ಸ್ವಸ್ಥವಾಗಿದ್ದರೆ ಮಾತ್ರ ಬದುಕಿನ ಕನಸನ್ನು ನನಸಾಗಿಸಲು ಸಾಧ್ಯ. ಸ್ವಸ್ಥ ಶರೀರಕ್ಕೆ ಯೋಗಾಭ್ಯಾಸ ಸಹಕಾರಿ. ಯೋಗದಿಂದ ನೆಮ್ಮದಿಯ ಬದುಕು ರೂಪಿಸಿಕೊಳ್ಳಬಹುದು ಎಂದು ಡಾl ಪ್ರಶಾಂತ್ ಶೆಟ್ಟಿ ಹೇಳಿದರಲ್ಲದೇ, ಈ ಬಾರಿಯ 6ನೇ ವಿಶ್ವ ಯೋಗ ದಿನಾಚರಣೆಯಲ್ಲಿ ದೇಶದ ಸುಮಾರು 40,000ಕ್ಕೂ ಅಧಿಕ ಕುಟುಂಬಗಳು ಭಾಗವಹಿಸುವ ಮೂಲಕ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿದೆ ಎಂದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡೀನ್ಗಳಾದ ಡಾl ಶಶಿಕಾಂತ್ ಜೈನ್, ಡಾl ಶಿವಪ್ರಸಾದ್ ಶೆಟ್ಟಿ, ಡಾl ಬಾಲಕೃಷ್ಣ ಶೆಟ್ಟಿ, ಡಾl ಸಂಜಾತಾ, ಡಾl ಗೀತಾ, ಶಾಂತಿವನದ ಟ್ರಸ್ಟ್ ಕಾರ್ಯದರ್ಶಿ ಸೀತರಾಮ ತೋಳ್ಪಡಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.







