ಬೆಳ್ತಂಗಡಿ, ಜೂ. ೨೫: ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ತಂಡವೊAದು ಧರ್ಮಸ್ಥಳ ಠಾಣೆಯ ಉಪನಿರೀಕ್ಷಕ ಪವನ್ ಕುಮಾರ್ ಹಾಗೂ ಠಾಣಾ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಕಂಬಿ ಎಣಿಸುವಂತಾಗಿದೆ.
ಧರ್ಮಸ್ಥಳ ಠಾಣೆಯ ಪೊಲೀಸ್ ಉಪನಿರೀಕ್ಷಕ ಪವನ್ ಕುಮಾರ್ ಹಾಗೂ ತಂಡವು ಜೂ ೨೫ ರ ಬೆಳಗ್ಗಿನ ವೇಳೆಯಲ್ಲಿ ಚಾರ್ಮಾಡಿ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಬದಲ್ಲಿ ಚಿಕ್ಕಮಗಳೂರಿನಿಂದ ಅನುಮಾನಾಸ್ಪದವಾಗಿ ಬರುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಮಾನುಷವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಕೆಎ ೧೬.ಸಿ. ೨೪೨೬ ನಂಬರ್‌ನ ಲಾರಿಯಲ್ಲಿ ಯಾವುದೇ ದಾಖಲೆಪತ್ರಗಳಿಲ್ಲದ ೫ ಎಮ್ಮೆ , ೪ ಹಸುಗಳು, ಹಾಗೂ ೨ ಸಣ್ಣ ಕರುಗಳು ಸೇರಿದಂತೆ ೧೧ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಚಾಲಕ ನರೇಶ್ ಸೇರಿದಂತೆ ಮೊಹಮ್ಮದ್ ಅಜರುದ್ದೀನ್ ಬಿನ್ ಅಬ್ದುಲ್ ರಹಿಮಾನ್, ಹಫೀಜ್ ಬಿನ್ ಮಹಮ್ಮದ್ ಇಬ್ರಾಹಿಂ ಎಂಬವರನ್ನು ವಶಕ್ಕೆ ಪಡೆದು ಲಾರಿ ಸಹಿತ ಜಾನುವಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ ೫,೭,೯,೧೧, ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ -೧೯೬೪ ಜೊತೆಗೆ ಕಲಂ ೩೪ ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.






