ಬೆಳ್ತಂಗಡಿ: ಕೊರೋನಾ ನಮ್ಮೂರಲ್ಲಿ ಇಲ್ಲ, ನಮಗೆ ಮಾಸ್ಕ್ ಬೇಡ, ವೈಯಕ್ತಿಕ ಅಂತರ ಯಾಕೆ ಎನ್ನುತ್ತಾ ಮಾಸ್ಕ್ ಧರಿಸದೇ ವೈಯಕ್ತಿಕ ಅಂತರ ಕಾಪಾಡದೇ ಅತಿ ಬುದ್ಧಿವಂತಿಕೆ ತೋರುತ್ತಿದ್ದ ವಿದ್ಯಾವಂತ ಅನಾಗರಿಕರ ದರ್ಪಕ್ಕೆ ಉತ್ತರ ನೀಡಿದ ಕೊರೋನಾ ಇದೀಗ ಸುರಕ್ಷತಾ ಕ್ರಮಗಳನ್ನು ಪಾಲಿಸುವವರ ನಿದ್ದೆಯನ್ನೂ ಕೆಡಿಸಿದೆ. ಕೊರೋನಾ ಬೆಳ್ತಂಗಡಿ ತಾಲೂಕಿಗೂ ಬಡಿದಪ್ಪಳಿಸಿದೆ.
ಉಜಿರೆಯ ಆಸ್ಪತ್ರೆಗಳು, ಹೊಟೇಲ್ಗಳು ಹಾಗೂ ಪೆಟ್ರೋಲ್ ಪಂಪ್ಗಳಲ್ಲಿ ಕೆಲಸ ಮಾಡುವ ಸುಮಾರು 52 ಮಂದಿಯ ಗಂಟಲು ದ್ರವವನ್ನು ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರ ಪೈಕಿ ಯಾವುದೇ ಟ್ರಾವೆಲ್ ಹಿಸ್ಟರಿಯೇ ಇಲ್ಲದ; ಟ್ರಾವೆಲ್ ಮಾಡುವವರ ವಾಹನಗಳಿಗೆ ಪೆಟ್ರೋಲ್ ಹಾಕುತ್ತಿದ್ದ ಉಜಿರೆಯ ಪೆಟ್ರೋಲ್ ಪಂಪ್ನ ಕೆಲಸದಾಕೆ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಗೊತ್ತಾಗಿದೆ. ತನ್ನ ವೃದ್ಧ ತಾಯಿಯೊಂದಿಗೆ ವಾಸ್ತವ್ಯವಿರುವ ಈ ಮಹಿಳೆಯ ತಾಯಿಗೂ ಈಗ ಕೊರೋನಾ ಟೆಸ್ಟ್ ಅನಿವಾರ್ಯ. ಈಕೆಯ ಗಂಡ ಮಂಡ್ಯದಲ್ಲಿ ಕೆಲಸದಲ್ಲಿದ್ದು, ಲಾಕ್ಡೌನ್ ಅವಧಿಯ ನಂತರ ಈತ ಊರಿಗೆ ಬಂದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಬಂದಿದ್ದರೆ ಈತನನ್ನೂ ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸ ಬೇಕಾಗಿದೆ.
ಜೂನ್ 27ರಂದು ಬಹಿರಂಗಗೊಂಡ ಈ ಆತಂಕಕಾರಿ ಮಾಹಿತಿ ಕಾನೂನನ್ನು ಗೌರವಿಸುವ ಹಾಗೂ ಕೊರೋನಾ ಸೋಂಕು ಹರಡದಂತೆ ಸರಕಾರ ಸೂಚಿಸಿದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ತಾಲೂಕಿನ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಇದೀಗ ಸದ್ರಿ ಮಹಿಳೆ ಕೆಲಸಕ್ಕಿದ್ದ ಪೆಟ್ರೋಲ್ ಪಂಪ್ನ್ನು ಸೀಲ್ಡೌನ್ ಮಾಡಲು ಸಿದ್ಧತೆ ನಡೆಯುತ್ತಿದ್ದು, ಇದು ಕೊರೋನಾ ಪ್ರಕರಣ ಪತ್ತೆಯಾದ ನಂತರದ ಮುಂಜಾಗ್ರತಾ ಕ್ರಮವಾಯಿತು. ಈ ಮಹಿಳೆಯಿಂದ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಂಡವರೆಷ್ಟು ಮಂದಿ….ಅವರೆಲ್ಲಾ ಯಾರು ಎಂದು ಪತ್ತೆ ಹಚ್ಚಿ ಕ್ವಾರಂಟೈನ್ಗೆ ಒಳಪಡಿಸಬೇಕಾಗಿದೆ. ಜೊತೆಗೆ ಈ ಪೆಟ್ರೋಲ್ ಪಂಪ್ನಲ್ಲಿ ಕೆಲಸಕ್ಕಿದ್ದ ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸಬೇಕಾಗಿದ್ದು; ಎಲ್ಲರ ಎದೆಯಲ್ಲಿ ಢವಢವ ಸುರುವಾಗಿದೆ.
ಇನ್ನಾದರೂ ತಾಲೂಕಿನ ಜನಪ್ರತಿನಿಧಿಗಳು, ಕೆಲ ಸೇವಾಸಂಸ್ಥೆ ಹೆಸರಿನ ಸಂಘಟನೆಗಳ ಪ್ರಮುಖರು, ಶಿಕ್ಷಕರು ಜೊತೆಗೆ ಸರಕಾರಿ ನೌಕರರು ಸರಿಯಾಗಿ ಮಾಸ್ಕ್ ಧರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಅಂತರ ಕಾಪಾಡುವುದರ ಜೊತೆಗೆ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿ; ತಾಲೂಕಿನಲ್ಲಿ ಕೊರೋನಾ ಸೋಂಕು ಇನ್ನಷ್ಟು ಅವಾಂತರ ಸೃಷ್ಟಿಸದಂತೆ ಮುನ್ನೆಚ್ಚರಿಕೆ ವಹಿಸುವಂತಾಗಲಿ.







