ಬೆಳ್ತಂಗಡಿ: ಮುಖ್ಯವಾಗಿ ತಾಲೂಕು ಕೇಂದ್ರವಾದ ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ದೊಡ್ಡ ವಾಣಿಜ್ಯ ಸಂಕೀರ್ಣಗಳಲ್ಲಿ ಸಿಂಡಿಕೇಟ್ ಯಾನೆ ಕೆನರಾ ಬ್ಯಾಂಕ್ ಹಾಗೂ ವಿಶ್ವ ವಿಖ್ಯಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೌಂಟರ್‌ಗಳಿವೆ. ಊರ-ಪರವೂರ ಗ್ರಾಹಕರನ್ನು ಸೆಳೆಯುವ ಈ ಎಟಿಎಂಗಳು ತಾಲೂಕು ಕೇಂದ್ರದ ಕೊರೋನಾ ಹಾಟ್‌ಸ್ಪಾಟ್ ಆಗುವ ಎಲ್ಲ ಲಕ್ಷಣವನ್ನೂ ಹೊಂದಿದಂತಿದೆ.
ಈ ಎಟಿಎಂಗಳಿಗೆ ನಿತ್ಯ ಕರ್ತವ್ಯ ನಿರ್ವಹಿಸಬೇಕಾದ ಸೆಕ್ಯೂರಿಟಿ ಗಾರ್ಡ್‌ಗಳಿಲ್ಲ. ಇಲ್ಲಿಗೆ ಹಣ ತೆಗೆಯಲು ಬರುವ ಗ್ರಾಹಕರನೇಕರು ತಮ್ಮ ವಾಹನದ ಇಂಜಿನ್ ಬಂದ್ ಮಾಡದೇ ಬರುವವರು; ಅಷ್ಟೊಂದು ಬ್ಯುಸಿ ಅವರೆಲ್ಲರೂ. ಇಲ್ಲಿಗೆ ಬರುವಾಗ 90% ಕ್ಕಿಂತಲೂ ಅಧಿಕ ಗ್ರಾಹಕರ ಮಾಸ್ಕ್ ಕತ್ತಲ್ಲಿ ಮಾಲಾಕಾರವಾಗಿರುತ್ತದೆ. ವೈಯಕ್ತಿಕ ಅಂತರ ಎಂದರೆ ಇವರಿಗೆ ಏನೆಂದೇ ಗೊತ್ತಿದ್ದಂತಿಲ್ಲ. ಇಂತಹ ಮಂದಿ ಎಟಿಎಂಗೆ ಕೊರೋನಾ ಸೋಂಕು ಹರಡಬಹುದಾದ ಭೀತಿ ಮರೆತು, ಸರಕಾರದ ಎಲ್ಲ ಸೂಚನೆಗಳನ್ನು ಧಿಕ್ಕರಿಸಿ ಬರುವಾಗ, ಇವರನ್ನು ಸ್ಯಾನಿಟೈಸರ್ ಇಲ್ಲದೇ ಸ್ವಾಗತಿಸಲು ಸಜ್ಜಾಗಿ ನಿಂತಿದೆ ಎಟಿಎಂಗಳು.

ಈ ಎಟಿಎಂಗಳಿಗೆ ಬರುವ ಗ್ರಾಹಕರು ಕೊರೋನಾ ಸೋಂಕು ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮ ಪಾಲಿಸುವಂತೆ ನೋಡಿಕೊಳ್ಳಲು ಬ್ಯಾಂಕ್ ವತಿಯಿಂದ ಸೆಕ್ಯೂರಿಟಿ ಗಾರ್ಡ್ ಇಲ್ಲ, ಎಟಿಎಂ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಇಲ್ಲ. ಊರ-ಪರವೂರ ಗ್ರಾಹಕರು ಈ ಎಟಿಎಂಗಳಿಗೆ ಬರುತ್ತಾರೆ; ಹಣ ಡ್ರಾ ಮಾಡುತ್ತಾರೆ. ಹೊರಗೆ ಹೋಗುವಾಗ ಎಟಿಎಂನ ಒಳಗೆ ಕೊರೋನಾ ಸೋಂಕು ಬಿಟ್ಟು ಹೋಗದಿದ್ದರೆ ಸಾಕು. ಕೆಲ ದಿನಗಳ ಹಿಂದಷ್ಟೇ ಉಜಿರೆಯ ಪೆಟ್ರೋಲ್ ಪಂಪಲ್ಲಿ ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕ ಅಲ್ಲಿನ ಪೆಟ್ರೋಲ್ ಹಾಕುವ ಬಡಪಾಯಿ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕಿನ ಪ್ರಸಾದ ನೀಡಿ ಹೋಗಿದ್ದಾನೆ. ಇನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಈ ಎಟಿಎಂ ಕೋಣೆಗಳು ಯಾವಾಗ ಕೊರೋನಾ ಹಾಟ್‌ಸ್ಪಾಟ್ ಆದೀತು ಎಂಬ ಭಯ-ಆತಂಕ ಕಾನೂನು ಪಾಲಿಸುವ-ಸರಕಾರ ಕೊರೋನಾ ಸೋಂಕು ಹರಡದಂತೆ ತಡೆಯಲು ಸೂಚಿಸಿದ ಸುರಕ್ಷತಾ ಕ್ರಮಗಳನ್ನು ಪಾಲಿಸುವ ತಾಲೂಕಿನ ನಾಗರಿಕರನ್ನು ಕಾಡತೊಡಗಿದೆ. ಈ ಬ್ಯಾಂಕ್‌ಗಳ ಮೆನೇಜರ್‌ಗಳು ಇತ್ತ ಗಮನ ಹರಿಸುವಂತಾಗಲಿ.







