ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿದ ಕೊರೋನಾ ಭೀತಿ

ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿದ ಕೊರೋನಾ ಭೀತಿ
Facebook
Twitter
LinkedIn
WhatsApp

ನಿಷ್ಕ್ರೀಯ ಆಡಳಿತ-ಸೀಲ್‌ಡೌನ್ ನಿಯಮ ಗಾಳಿಗೆ

ಬೆಳ್ತಂಗಡಿ: ನಾಲ್ಕು ದಿನಗಳ ಹಿಂದೆ ಉಜಿರೆಯ ಪೆಟ್ರೋಲ್ ಪಂಪಿನ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು; ಮಾರನೆಯ ದಿನ ಇಂದಬೆಟ್ಟುವಿನ ವೃದ್ಧನೋರ್ವನಿಗೆ ಕೊರೋನಾ ಪಾಸಿಟಿವ್ ಎಂದ ಆರೋಗ್ಯ ಇಲಾಖೆ; ಮರುದಿನ ಮಡಂತ್ಯಾರಿನ ಮೀನು ಮಾರಾಟಗಾರನಿಗೆ ಕೊರೋನಾ; ನಿನ್ನೆ ಸೋಣಂದೂರಿನ ವ್ಯಕ್ತಿಗೆ ಪಾಸಿಟೀವ್; ಇಂದು ಕೊಯ್ಯೂರಿನ ಯುವತಿಗೆ ಮಾತ್ರವಲ್ಲ, ಉಜಿರೆಯ ನಿವಾಸಿಯೋರ್ವನಿಗೆ ಕೊರೋನಾ ಪಾಸಿಟಿವ್…. ಇದರೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿರುವ ವಿಚಾರಣಾಧೀನ ಕೈದಿಗೂ ಕೊರೋನಾ ಪಾಸಿಟಿವ್….. ಹೀಗೆ ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಬೆಳೆಯುತ್ತಲೇ ಇದೆ. ಈ ಎಲ್ಲಾ ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಪರ್ಕದ ಮೂಲ ಪತ್ತೆ ಹಚ್ಚುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ತಾಲೂಕಿನಲ್ಲಿ ಲಾಕ್‌ಡೌನಿನ ಆರಂಭದ ದಿನಗಳಲ್ಲಿ ಕಾನೂನು-ನಿಬಂಧನೆ ಅನುಷ್ಠಾನ ವಿಚಾರದಲ್ಲಿ ತಾಲೂಕು ಆಡಳಿತ ತೋರುತ್ತಿದ್ದ ಕಾಳಜಿ ಹಾಗೂ ಆಸಕ್ತಿ ಬರಬರುತ್ತಾ ಯಾವುದೋ ಒತ್ತಡಕ್ಕೆ ಒಳಗಾದಂತೆ ಕಡಿಮೆಯಾಗಿ ಇಂದು ಸಂಪೂರ್ಣ ನಿಷ್ಕ್ರೀಯವಾಗಿದೆ.
ಸೋಂಕಿತರ ಸಂಪರ್ಕದಲ್ಲಿದ್ದವರ ಕ್ವಾರಂಟೈನ್ ಹಾಗೂ ಸೀಮಿತ ಪ್ರದೇಶಗಳ ಸೀಲ್‌ಡೌನ್ ಕೂಡಾ ಪ್ರಹಸನವಾಗುತ್ತಿರುವುದು ತಾಲೂಕಿನಲ್ಲಿ ಕಾನೂನನ್ನು ಪಾಲಿಸುವ ನಾಗರಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಸರಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಪರೋಕ್ಷ ಹಿಡಿತವಿರುವ ಪ್ರಭಾವಿಗಳಿಗೆ ಇಲ್ಲಿ ಯಾವುದೇ ಕಾನೂನು ಇದ್ದಂತಿಲ್ಲ. ಇದರ ಸ್ಯಾಂಪಲ್ ಇಲ್ಲಿದೆ ನೋಡಿ‌.
ನಾಲ್ಕು ದಿನಗಳ ಹಿಂದೆ ಉಜಿರೆಯ ಪೆಟ್ರೋಲ್ ಪಂಪಿನ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿತ್ತು. ಸಾರ್ವಜನಿಕರ ಆತಂಕ ಹಾಗೂ ಒತ್ತಡಕ್ಕೆ ಮಣಿದ ತಾಲೂಕು ಆಡಳಿತ ಎರಡು ದಿನಗಳ ಬಳಿಕ ಸೋಂಕಿತ ಮಹಿಳೆ ಕೆಲಸದಲ್ಲಿದ್ದ ಪೆಟ್ರೋಲ್ ಪಂಪನ್ನು ಸೀಲ್‌ಡೌನ್ ಮಾಡಿತು. ಆದರೆ ಸರಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ತನ್ನ ಪ್ರಭಾವ ಬೀರಿದ ಪೆಟ್ರೋಲ್ ಪಂಪ್ ಮಾಲೀಕರು ಎರಡೇ ದಿನಗಳಲ್ಲಿ ಸೀಲ್‌ಡೌನ್ ತೆರವುಗೊಳಿಸಿ ರಾಜಾರೋಷವಾಗಿ ಪೆಟ್ರೋಲ್ -ಡೀಸಿಲ್ ಮಾರಾಟ ಮಾಡುತ್ತಿದ್ದಾರೆ. ಸೋಂಕಿತ ಮಹಿಳಾ ಸಿಬ್ಬಂದಿಯೊಂದಿಗೆ ಪೆಟ್ರೋಲ್ ಪಂಪಲ್ಲಿ ಕೆಲಸಕ್ಕಿದ್ದ ಹತ್ತಾರು ಮಂದಿಯ ಗಂಟಲು ದ್ರವ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಾಗಿದೆ. ಅದಕ್ಕೂ ಮುನ್ನವೇ ಪೆಟ್ರೋಲ್ ಪಂಪಿನ ಸೀಲ್‌ಡೌನ್ ತೆರವುಗೊಳಿಸಿದ ಜಿಲ್ಲಾ ಹಾಗೂ ತಾಲೂಕು ಆಡಳಿತದ ನಡೆ ಸಾಕಷ್ಟು ಸಂದೇಹಗಳಿಗೆ ಎಡೆಮಾಡಿದೆ.
ಸರಕಾರದ ನಿಯಮದಂತೆ ಕೊರೋನಾ ಸೋಂಕು ಪತ್ತೆಯಾದ ವ್ಯಕ್ತಿಯ ಮನೆ ಹಾಗೂ ವ್ಯಕ್ತಿ ಕೆಲಸ ಮಾಡುವ ಸ್ಥಳಗಳನ್ನು 14ದಿನಗಳ ಕಾಲ ಸೀಲ್‌ಡೌನ್ ಮಾಡಬೇಕು. ಅಂತೆಯೇ ಸೋಂಕಿತ ಸಂಪರ್ಕದಲ್ಲಿದ್ದ ಇತರ ವ್ಯಕ್ತಿಗಳನ್ನೂ ಕೊರೋನ ಪತ್ತೆ ಪರೀಕ್ಷೆಗೊಳಪಡಿಸಬೇಕು. ಆದರೆ ಉಜಿರೆ ಪಟ್ರೋಲ್ ಪಂಪಿಗೆ ಈ ಯಾವುದೇ ನಿಯಮ ಅನ್ವಯವಾಗುವುದಿಲ್ಲವಾ… ಸಿರಿವಂತರ ಅಥವಾ ಪ್ರಭಾವಿಗಳ ಲಾಬಿಗೆ ಮಣಿದ ಆಡಳಿತದ ಇಂತಹಾ ಲಜ್ಜೆಗೆಟ್ಟ ನಡೆಯಿಂದ ಕಾನೂನನ್ನು ಗೌರವಿಸಿ ಬದುಕುವ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಮಾತ್ರವಲ್ಲ, ಆಡಳಿತ ವ್ಯವಸ್ಥೆಯ ಇಂತಹ ತಪ್ಪು ನಿರ್ಧಾರದಿಂದ ತಾಲೂಕಿನಲ್ಲಿ ಕೊರೋನಾ ಸೋಂಕು ಇನ್ನಷ್ಟು ಹರಡಬಹುದು ಎಂಬ ಭೀತಿ ನಾಗರಿಕರಲ್ಲಿ ಮೂಡಲಾರಂಭಿಸಿದೆ.

Latest News

Related Posts