ಕೊರೋನಾ ಸೋಂಕಿನ ಭೀತಿಯ ನಡುವೆ ಸಾರ್ವಜನಿಕ ಉತ್ಸವಗಳು ಸಾಂಕೇತಿಕವಾಗಿ ಸಾರ್ವಜನಿಕ ಉತ್ಸವ ನಡೆಸಲು ತೀರ್ಮಾನ

ಕೊರೋನಾ ಸೋಂಕಿನ ಭೀತಿಯ ನಡುವೆ ಸಾರ್ವಜನಿಕ ಉತ್ಸವಗಳು ಸಾಂಕೇತಿಕವಾಗಿ ಸಾರ್ವಜನಿಕ ಉತ್ಸವ ನಡೆಸಲು ತೀರ್ಮಾನ
Facebook
Twitter
LinkedIn
WhatsApp

ಕೊರೋನಾ ಸೋಂಕಿನ ಆತಂಕದ ನಡುವೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಹಿತ ವಿವಿಧ ಸಾರ್ವಜನಿಕ ಉತ್ಸವಗಳನ್ನು ಆಚರಿಸಲು ಪಾಲಿಸಬೇಕಾದ ನಿಯಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಬೆಳ್ತಂಗಡಿ ತಾಲೂಕಿನ ವಿವಿಧ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಹಿತ ವಿವಿಧ ಸಾರ್ವಜನಿಕ ಉತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆಯು ಜುಲೈ 15ರಂದು ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಸಭಾಭವನದಲ್ಲಿ ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ನಡೆಯಿತು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಹರೀಶ್ ಪೂಂಜಾ, ಕೊರೋನಾ ಸೋಂಕು ಹರಡುವ ಭೀತಿಯ ನಡುವೆ, ಪ್ರತಿವರ್ಷ ನಮ್ಮ ನಮ್ಮ ಊರುಗಳಲ್ಲಿ ಆಚರಿಸುವ ಸಾರ್ವಜನಿಕ ಶ್ರೀ ಕೃಷ್ಣಾಷ್ಠಮಿ ಹಾಗೂ ಶ್ರೀ ಗಣೇಶೋತ್ಸವವನ್ನು ಸಂಪ್ರದಾಯಕ್ಕೆ ಧಕ್ಕೆಯಾಗದಂತೆ, ಸಾಂಕೇತಿಕವಾಗಿ ಸುರಕ್ಷತಾ ಕ್ರಮಗಳೊಂದಿಗೆ ಯಾವ ರೀತಿ ಆಚರಿಸಬಹುದು ಎಂಬ ಬಗ್ಗೆ ಸಭೆಯಲ್ಲಿ ಹಾಜರಿದ್ದ ವಿವಿಧ ಗ್ರಾಮಗಳ ಉತ್ಸವ ಸಮಿತಿಯ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುವಂತೆ ವಿನಂತಿಸಿದರು.

ಬೆಳ್ತಂಗಡಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ವೇದಾವತಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಶಿಧರ ಕಲ್ಮಂಜ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೊರಗಪ್ಪ ನಾಯ್ಕ, ಸೌಮ್ಯಲತಾ ಜಯಂತ ಗೌಡ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ., ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ವಿವಿಧ ಸಾರ್ವಜನಿಕ ಉತ್ಸವ ಸಮಿತಿಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸಮಿತಿಗಳ ವತಿಯಿಂದ ಗಣಹೋಮ‌ ಮಾಡುವ ಮೂಲಕ ಆಚರಿಸುವ ಅಭಿಪ್ರಾಯ ವ್ಯಕ್ತವಾಯಿತು. ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಗ್ರಾಮದ ದೇಗುಲದಲ್ಲಿ ಭಜನೆ ಹಾಗೂ ಪ್ರಾರ್ಥನೆಯ ಮೂಲಕ ಸರಕಾರದ ಮಾರ್ಗಸೂಚಿಯಂತೆ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಈ ಬಾರಿ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಹಿತ ಎಲ್ಲ ಸಾರ್ವಜನಿಕ ಉತ್ಸವಗಳು ಕೊರೋನಾ ಸೋಂಕು ಮುಕ್ತ ನಾಡು ನಿರ್ಮಾಣಕ್ಕೆ ಸಾಮೂಹಿಕವಾಗಿ ಪ್ರಾರ್ಥಿಸುವ ಉತ್ಸವಗಳಾಗಲಿ. ಎಲ್ಲ ಸ್ಥಳಗಳಲ್ಲಿ ಏಕಕಾಲದಲ್ಲಿ ಗಣಹೋಮ ನಡೆಸಿ, ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಬೆಳ್ತಂಗಡಿ ತಾಲೂಕಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಹಿತ ಎಲ್ಲ ಸಾರ್ವಜನಿಕ ಉತ್ಸವಗಳು ರಾಜ್ಯಕ್ಕೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಎಲ್ಲರ ಸಹಕಾರದಿಂದ ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು. ತಾಲೂಕು ಪಂಚಾಯತ್‌ನ ಜಯಾನಂದ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ. ವಂದಿಸಿದರು.

Latest News

Related Posts