ಆಸ್ಪತ್ರೆಯಿಂದ ಪರಾರಿಯಾದ ಬಾಣಂತಿ-ಮಗು ಮತ್ತೆ ಆಸ್ಪತ್ರೆಗೆ
ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಜುಲೈ 15ರ ರಾತ್ರಿ ಹೆರಿಗೆಯಾದ ಮಹಿಳೆಯೋರ್ವಳು ತನಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ ಎಂಬ ಭಯದಿಂದ ಪತಿಯೊಂದಿಗೆ ಜುಲೈ 16ರ ರಾತೋರಾತ್ರಿ ಆಸ್ಪತ್ರೆಯ ಗೇಟಿನ ಬೀಗ ಮುರಿದು ಪರಾರಿಯಾದ ಘಟನೆ ವರದಿಯಾಗಿದೆ. ಅಪರಾತ್ರಿಯಲ್ಲಿ ಪರಾರಿಯಾದ ಬಾಣಂತಿ-ಮಗುವನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು ಮತ್ತೆ ಅವರನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ತಂದು ಬಿಟ್ಟಿದ್ದಾರೆ.
ಘಟನೆಯ ವಿವರ: ಜುಲೈ 12ರಂದು ನಾವೂರಿನ ಮಹಿಳೆಯೋರ್ವಳು ಹೆರಿಗೆಗಾಗಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಿಯಮದಂತೆ ವೈದ್ಯರು ಗರ್ಭಿಣಿಯ ಗಂಟಲದ್ರವವನ್ನು ಕೊರೋನಾ ಪರೀಕ್ಷೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಈ ನಡುವೆ ಕೊರೋನಾ ಪರೀಕ್ಷೆಯ ವರದಿ ಬರುವ ಮುನ್ನವೇ ಅಂದರೆ ಜುಲೈ 15 ರಂದು ಆಕೆಗೆ ಹೆರಿಗೆಯೂ ಆಯಿತು. ಜುಲೈ 16ರ ಸಂಜೆ ಆಕೆಯ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಪಾಸಿಟೀವ್ ಆಗಿತ್ತು. ಬಾಣಂತಿಗೆ ಹಾಗೂ ಆಕೆಯ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರು, ಬಾಣಂತಿ ಹಾಗೂ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೊಷನ್ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು.
ಈ ನಡುವೆ ಜುಲೈ 16ರ ರಾತ್ರಿ ತನ್ನ ಮಾರುತಿ ಓಮ್ನಿ ಕಾರಲ್ಲಿ ಆಸ್ಪತ್ರೆಗೆ ಬಂದ ಆಕೆಯ ಪತಿ, ಆಸ್ಪತ್ರೆಯ ಗೇಟಿನ ಬೀಗ ಮುರಿದು ಒಳ ನುಗ್ಗಿದ್ದಲ್ಲದೇ, ಕರ್ತವ್ಯ ನಿರತ ವೈದ್ಯರ ಹಾಗೂ ಸಿಬ್ಬಂದಿಗಳ ಮಾತು-ಸೂಚನೆಗಳನ್ನೂ ಧಿಕ್ಕರಿಸಿ, ತಡೆಯಲು ಬಂದವರನ್ನು ತಳ್ಳಿ, ತನ್ನ ಬಾಣಂತಿ ಪತ್ನಿ ಹಾಗೂ ಹಸುಗೂಸಿನೊಂದಿಗೆ ಪರಾರಿಯಾಗಿದ್ದಾನೆ. ವೈದ್ಯರು ತಕ್ಷಣ ಘಟನೆಯ ವಿವರವನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸುವ ಸಮಯಪ್ರಜ್ಞೆ ತೋರಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರ ತಂಡ ಸಬ್‌ಇನ್ಸ್‌ಪೆಕ್ಟರ್ ನಂದ ಕುಮಾರ್‌ರ ಮಾರ್ಗದರ್ಶನದಲ್ಲಿ ಪರಾರಿಯಾದ ಬಾಣಂತಿ-ಮಗುವನ್ನು ಪತ್ತೆಹಚ್ಚಿ ಮತ್ತೆ ಆಸ್ಪತ್ರೆಗೆ ಕರೆತಂದು ಬಿಟ್ಟಿದ್ದಾರೆ. ಇಂದು ಜುಲೈ 17ರಂದು ಬಾಣಂತಿ-ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೊಷನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ನಡುವೆ ಜುಲೈ 15ರಂದು ಹೆರಿಗೆಯಾದ ಮಡಂತ್ಯಾರು ಕಡೆಯ ಇನ್ನೊಂದು ಮಹಿಳೆಗೂ ಕೊರೋನಾ ಪಾಸಿಟೀವ್ ಬಂದಿದ್ದು, ಆಕೆಯೂ ಗೊಂದಲಕ್ಕೊಳಗಾಗಿ ಆಸ್ಪತ್ರೆಯಿಂದ ಪರಾರಿಯಾಗಲು ಸ್ಕೆಚ್ ಹಾಕಿದಳಾದರೂ ವೈದ್ಯರ ಸಕಾಲಿಕ ಕ್ರಮದಿಂದ ಆಕೆ ಪರಾರಿಯಾಗುವ ದುಸ್ಸಾಹಸವನ್ನು ಕೈಬಿಟ್ಟಳು ಎನ್ನಲಾಗಿದೆ.
ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾದ ಮೂವರು ಗರ್ಭಿಣಿಯರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಆಸ್ಪತ್ರೆಯ ಹೆರಿಗೆ ವಾರ್ಡನ್ನು ಸೀಲ್‌ಡೌನ್ ಮಾಡಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಯೊಂದಿಗೆ ಅವರನ್ನು ಕಾವಲು ಕಾಯುವ ದುಸ್ಥಿತಿ ವೈದ್ಯ ಹಾಗೂ ದಾದಿಯರಿಗೆ ಬಂದಿರೋದು ಆಸ್ಪತ್ರೆ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯಕ್ಕೆ ಒಂದು ಉದಾಹರಣೆ ಅಷ್ಟೇ. ಸರಕಾರಿ ಆಸ್ಪತ್ರೆಗಳಲ್ಲಿ ಸಶಸ್ತ್ರ ಕಾವಲುಗಾರರಿಲ್ಲದಿರುವುದು ಬಲುದೊಡ್ಡ ಲೋಪವಾಗಿದೆ. ಪರಿಸ್ಥಿತಿ ಕೈಮೀರಿದರೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಹಾಗೂ ದಾದಿಯರ ರಕ್ಷಣೆ ಯಾರ ಜವಾಬ್ದಾರಿ ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಬೇಕಾಗಿದೆ. ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ಕಾರ್ಯಾಚರಿಸುವ ಪೊಲೀಸರಿಗೂ ಕೊರೋನಾ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಿಪಿಇ ಕಿಟ್ ಸಹಿತ ಸರಿಯಾದ ಸುರಕ್ಷತಾ ಸಾಧನಗಳನ್ನು ಒದಗಿಸಬೇಕಾದ್ದು ಸರಕಾರದ ಜವಾಬ್ದಾರಿ. ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ ಇತ್ತ ಗಮನ ಹರಿಸಬೇಕಾಗಿದೆ.







