ಪಡಿತರದೊಂದಿಗೆ ಕೊರೋನಾ ಹರಡುವ ಹುನ್ನಾರ!

ಪಡಿತರದೊಂದಿಗೆ ಕೊರೋನಾ ಹರಡುವ ಹುನ್ನಾರ!
Facebook
Twitter
LinkedIn
WhatsApp

ಪಡಿತರ ಅಂಗಡಿಗಳಲ್ಲಿ ಜನಜಂಗುಳಿ

ಬೆಳ್ತಂಗಡಿ: ಒಂದೆಡೆ ಸರಕಾರ ಕೊರೋನಾ ಸೋಂಕು ತಡೆಗೆ ಲಾಕ್‌ಡೌನ್‌ನ ಮೊರೆ ಹೋಗಿ, ಜನರ ಅನಗತ್ಯ ಓಡಾಟ ಹಾಗೂ ಒಂದೇ ಸ್ಥಳದಲ್ಲಿ ಗುಂಪು ಸೇರುವಿಕೆಗೆ ತಡೆ ಹಾಕಲು ಯೋಜಿಸಿದರೆ; ಇನ್ನೊಂದು ಕಡೆ ಇದೇ ಸರಕಾರ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಜನತೆಗೆ ಅವರವರ ಊರುಗಳಲ್ಲಿ ಪಡಿತರ ಅಂಗಡಿಗಳಲ್ಲಿ ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸುವ ಹೆಸರಲ್ಲಿ ಕೊರೋನಾ ಸೋಂಕನ್ನೂ ಪುಕ್ಕಟೆಯಾಗಿ ಹರಡಲು ವೇದಿಕೆ ಸಿದ್ಧಪಡಿಸುತ್ತಿದೆಯಾ ಎಂಬ ಭಯ ನಾಡಿನ ಕಾನೂನು-ಕಟ್ಟಳೆಗಳನ್ನು ಗೌರವಿಸಿ-ಪಾಲಿಸುವ ನಾಗರಿಕರನ್ನು ಕಾಡಲಾರಂಭಿಸಿದೆ.
ಬೆಳ್ತಂಗಡಿ ತಾಲೂಕಿನ ವಿವಿಧ ಪಡಿತರ ವಿತರಣೆಯ ಅಂಗಡಿಗಳಲ್ಲಿ ಜುಲೈ 21ರಂದು ಸೇರಿದ ಜನಜಂಗುಳಿಯನ್ನು ಕಂಡರೆ ಆಹಾರ ಇಲಾಖೆ ತಾಲೂಕಿನಲ್ಲಿ ಪಡಿತರ ವಿತರಣೆಯಲ್ಲಿ‌ ಮಾಡಿದ ಎಡವಟ್ಟು ಬಟಾಬಯಲಾಗುತ್ತದೆ. ತಾಲೂಕಿನ ಲಾಯ್ಲ ಹಾಗೂ ಕುವೆಟ್ಟು ಪಡಿತರ ಅಂಗಡಿಗಳಲ್ಲಿ ಸೇರಿರುವ ಜನಜಂಗುಳಿಯ ಚಿತ್ರವನ್ನೊಮ್ಮೆ ಗಮನಿಸಿ. ಪಡಿತರ ಪಡೆಯಲು ಜನತೆಗೆ ಸಾಕಷ್ಟು ಕಾಲಾವಕಾಶ ನೀಡಿದರೆ ಯಾರೂ ಪಡಿತರ ಪಡೆಯಲು ಅಂಗಡಿಗಳ ಮುಂದೆ ಈ ರೀತಿಯಾಗಿ ಮುಗಿಬೀಳುವುದಿಲ್ಲ.
ಆಹಾರ ಇಲಾಖೆ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಬಡಪಾಯಿಗಳಿಗೆ ಸೀಮಿತ ಅವಧಿ ನೀಡಿ, ಪಡಿತರ ಪಡೆಯಲು ತಾಕೀತು ಮಾಡಿದರೆ, ಹಸಿದ ಹೊಟ್ಟೆಗಳು ನಾಮುಂದು-ತಾಮುಂದು ಎಂದು ಪಡಿತರ ಅಂಗಡಿಗಳ ಎದುರು ಧಾವಿಸುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸಲು ಮರೆಯುತ್ತದೆ, ವೈಯಕ್ತಿಕ ಅಂತರದ ಪರಿವೇ ಇರೋದಿಲ್ಲ; ಪಡಿತರ ಅಂಗಡಿಗಳ ವಠಾರದಲ್ಲಿ ನಿಲ್ಲಲು ಸ್ಥಳವಿದ್ದರೆ ತಾನೇ ವೈಯಕ್ತಿಕ ಅಂತರ ಕಾಪಾಡೋದು? ಆಹಾರ ಇಲಾಖೆ ಇನ್ನಾದರೂ ಎಚ್ಚೆತ್ತು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡಪಾಯಿಗಳಿಗೆ ತಿಂಗಳ ಪಡಿತರದೊಂದಿಗೆ ಉಚಿತ ಕೊರೋನಾ ಸೋಂಕು ಹರಡುವ ಯತ್ನವನ್ನು ಕೈಬಿಡಲಿ.

Latest News

Related Posts