ಕಿರುಸೇತುವೆ ಉದ್ಘಾಟನೆ : ಮಾಸ್ಕ್-ವೈಯಕ್ತಿಕ ಅಂತರ ಮಾಯ
ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಟ್ಟಡೆ ಗ್ರಾಮದ ಫಂಡಿಜೆಯ ದಂಬೆದಡಿ ಎಂಬಲ್ಲಿ ಶಾಸಕರ ವಿವೇಚನಾ ಅನುದಾನದಲ್ಲಿ ನಿರ್ಮಾಣವಾದ ಕಿರು ಸೇತುವೆಯನ್ನು ಜುಲೈ 21ರಂದು ಬೆಳ್ತಂಗಡಿಯ ಶಾಸಕ ಹರೀಶ ಪೂಂಜ ಉದ್ಘಾಟಿಸಿದರು. ಕೊರೋನಾ ಸೋಂಕು ತಡೆಗೆ ಸರಕಾರ ಸೂಚಿಸಿದ ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ಶಾಸಕ ಹರೀಶ್ ಪೂಂಜರಿಗೆ ಸಾಥ್ ನೀಡಿದ ಅವರ ಹಿಂಬಾಲಕರು ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ವೈಯಕ್ತಿಕ ಅಂತರ ಕಾಪಾಡದೇ ಭಾಗವಹಿಸುವ ಮೂಲಕ ಕೊರೋನಾ ಸೋಂಕಿಗೆ ಸವಾಲು ಹಾಕುವ ಆವೇಶದಲ್ಲಿ ಸರಕಾರದ ಸೂಚನೆಗೆ ಗೌರವ ನೀಡಿ ಪಾಲಿಸುವ ಸ್ಥಳೀಯ ಅಮಾಯಕ ನಿವಾಸಿಗರಲ್ಲಿ ಭಯ ಹಾಗೂ ಆತಂಕ ಮೂಡಿಸಿದರು.
ಕಿರುಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, ತಾಲೂಕಿಗೆ ಕಳೆದೆರಡು ವರ್ಷಗಳಲ್ಲಿ ಸುಮಾರು 600 ಕೋಟಿ ರೂಪಾಯಿಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ತಾಲೂಕಿನಲ್ಲಿ ಅಗತ್ಯವಿರುವ 28ಕಡೆಗಳಲ್ಲಿ ಇಂತಹ ಕಿರುಸೇತುವೆಗಳ ನಿರ್ಮಾಣವಾಗಲಿದೆ. ನಿಟ್ಟಡೆ ಗ್ರಾಮದಲ್ಲಿ ಎರಡು ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಳ್ಳಲಿವೆ. ಗ್ರಾಮದ ಯಾವತ್ತೂ ಅಭಿವೃದ್ಧಿಗೆ ನಾನು ಸಿದ್ಧ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶಿವಪ್ರಸಾದ ಅಜಿಲ, ಸೇತುವೆ ನಿರ್ಮಿಸಿದ ಪುತ್ತೂರು ಮಾಸ್ಟರ್ ಪ್ಲಾನರಿ ಮಾಲಕ ಆಕಾಶ್, ಗುತ್ತಿಗೆದಾರ ಪ್ರಭಾಕರ, ತಾಲೂಕು ಪಂಚಾಯತ್ ಸದಸ್ಯ ಜೋಯೆಲ್ ಮೆಂಡೋನ್ಸಾ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ನಿವೃತ್ತ ಮುಖ್ಯಶಿಕ್ಷಕ ಮಾಧವ ಕಾರಂತ, ಸ್ಥಳೀಯ ಪ್ರಮುಖರಾದ ಸುರೇಶ್ ಹೆಬ್ಬಾರ್, ರತ್ನಾಕರ ಹೆಬ್ಬಾರ್, ಪ್ರಸನ್ನ ಹೆಬ್ಬಾರ್, ವಿಕಾಸ ಹೆಬ್ಬಾರ್, ಜಯಾನಂದ ಸಾಠೆ, ಶರಶ್ಚಂದ್ರ ತಾಮನ್ಕಾರ್, ಭಾಸ್ಕರ ಆಚಾರ್ಯ, ವರದ ಕುಲಾಲ್, ಜನಾರ್ದನ, ಕಾರ್ತಿಕ, ಸತೀಶ, ದಿನೇಶ, ಪ್ರದೀಪ, ಅನಿಲ್ ಹೆಗ್ಡೆ, ಭುವನೇಶ್ ಮತ್ತಿತರರು ಉಪಸ್ಥಿತರಿದ್ದರು. ಕುಕ್ಕೇಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸೋಮನಾಥ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಕಳೆದ ಮಳೆಗಾಲದಲ್ಲಿ ಇದೇ ಜಾಗದಲ್ಲಿ ಅಡಕೆ ಮರದ ಕಾಲು ಸಂಕವಿತ್ತು. ಆದಿತ್ಯ ಎಂಬ ಬಾಲಕ ಸಂಕದ ಮೇಲೆ ಹೋಗುತ್ತಿದ್ದಾಗ ಜಾರಿ ಬೀಳುತ್ತಿದ್ದ. ಆದರೆ ಅದೇ ವೇಳೆ ಸುಜಯ ಎಂಬ ಬಾಲಕ ಅದಿತ್ಯನ ರಕ್ಷಣೆ ಮಾಡಿ ಪ್ರಾಣ ಉಳಿಸಿದ್ದ. ಸುಜಯನ ಸಮಯಪ್ರಜ್ಞೆಗೆ ರಾಜ್ಯ ಸರಕಾರ ಸಮ್ಮಾನಿಸಿತ್ತು.







