ಶಾಸಕರ ಹಾದಿ ತಪ್ಪಿಸುವ ಅಧಿಕಾರಿಗಳು

Facebook
Twitter
LinkedIn
WhatsApp

ಅಪಾಯದಂಚಿನಲ್ಲಿ ಕೊರೋನಾ ವಾರಿಯರ್ಸ್

ಬೆಳ್ತಂಗಡಿ: ಹೊರ ದೇಶದಿಂದ ಬಂದವರಿಂದ ಕೊರೋನಾ ಸೋಂಕು ಹರಡಿದ್ದಾಯಿತು. ಹೊರ ರಾಜ್ಯದಿಂದ ಬಂದವರು ನಮ್ಮ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹರಡಿದ್ದೂ ಆಯಿತು. ಇದೀಗ ಆರಂಭದಿಂದಲೂ ಹಳ್ಳಿಹಳ್ಳಿಗಳಲ್ಲಿ ಕೊರೋನಾ ಸೋಂಕಿನ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಆಶಾಕಾರ್ಯಕರ್ತೆಯರ ಸರದಿ. ಇವರನ್ನು ಇದೀಗ ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ತಮಗೆ ಮಾಹಿತಿ ಅಥವಾ ಸೂಕ್ತ ತರಬೇತಿಯೇ ಇಲ್ಲದ ಕಾರ್ಯಕ್ಕೆ ಬಳಸಿಕೊಳ್ಳಲು ಸರಕಾರ ತೀರ್ಮಾನಿಸಿದಂತಿದೆ.

ಸಾಂದರ್ಭಿಕ ಚಿತ್ರ


ಈ ಕೊರೋನಾ ವಾರಿಯರ್ಸ್ ಕಳೆದ ಕೆಲ ತಿಂಗಳುಗಳಿಂದ ತಮ್ಮ ಜೀವವನ್ನೇ ಪಣಕ್ಕಿಟ್ಟು, ಸರಕಾರ ನೀಡುವ ಮೂರು ಕಾಸಿನ ವೇತನವನ್ನು ಗೌರವಧನ ಎಂಬ ಹೆಸರಲ್ಲಿ ಸ್ವೀಕರಿಸಿ, ಹಳ್ಳಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡೇ ಹೋಗಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಆಯಾ ಹಳ್ಳಿಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಆರೋಗ್ಯ ವಿಚಾರಿಸಿ, ಪ್ರತಿನಿತ್ಯ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಗೆ ವರದಿ ನೀಡುತ್ತಿದ್ದರು. ಈ ಕೊರೋನಾ ವಾರಿಯರ್ಸ್‌ಗಳಿಗೆ ಕನಿಷ್ಟ ವಾಹನ ಸೌಲಭ್ಯ ಒದಗಿಸುವುದು ಒತ್ತಟ್ಟಿಗಿರಲಿ; ಇಂತಹ ಸಂದರ್ಭಗಳಲ್ಲಿ ತಮ್ಮ ಜೀವ ರಕ್ಷಣೆಗೆ ಬೇಕಾದ ಅಗತ್ಯ ಪರಿಕರಗಳಾದ ಪಿಪಿಇ ಕಿಟ್ ಸಹಿತ ಮೂಲಭೂತ ಸೌಲಭ್ಯಗಳನ್ನೇ ಸರಕಾರ ನೀಡಿಲ್ಲ‌.
ಇದೀಗ ರಾಜ್ಯದ ಎರಡಕ್ಕಿಂತ ಹೆಚ್ಚು ಕೋವಿಡ್19 ಪ್ರಕರಣಗಳಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರದೇಶವನ್ನು ಹೈರಿಸ್ಕ್ ಪ್ರದೇಶವೆಂದು ಆರೋಗ್ಯ ಇಲಾಖೆ ಘೋಷಿಸಿದ್ದು, ಈ ಹೈರಿಸ್ಕ್ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಪ್ರತಿಯೋರ್ವರ ಆರೋಗ್ಯ ತಪಾಸಣೆ ನಡೆಸಲು ತೀರ್ಮಾನಿಸಿದೆ. ಅದರಂತೆ ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಳದಂಗಡಿ, ಬೆಳ್ತಂಗಡಿ,‌ ಮುಂಡಾಜೆ, ಉಜಿರೆ, ಕಣಿಯೂರು, ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೈರಿಸ್ಕ್ ಪ್ರದೇಶ ಎಂದು ಗುರುತಿಸಲಾಗಿದ್ದು, ಈ ಪ್ರದೇಶದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಮನೆಮನೆಗಳಿಗೆ ನಡೆದುಕೊಂಡೇ ಹೋಗಿ ಎಲ್ಲ ಮನೆಗಳ ಕುಟುಂಬ ಸದಸ್ಯರ ಜ್ವರ, ನೆಗಡಿ, ಕೆಮ್ಮು, ಪಲ್ಸ್, ಬಿ.ಪಿ. ಪರೀಕ್ಷೆ ನಡೆಸಿ ವೈದ್ಯಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಆದೇಶಿಸಲಾಗಿದೆ. ಕೊರೋನಾ ವಾರಿಯರ್ಸ್‌ಗಳಾದ ಈ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ‌ ಕರ್ತವ್ಯ ನಿರ್ವಹಿಸುವ ಸಂದರ್ಭ ತಮ್ಮ ಜೀವ ರಕ್ಷಿಸಿಕೊಳ್ಳಲು ಅಗತ್ಯವಿರುವ ಪಿಪಿಇ ಕಿಟ್ ಸಹಿತ ಎಲ್ಲ ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಿಲ್ಲ. ಸ್ಥಳೀಯ ಆಡಳಿತ ಈ‌ ಕೊರೋನಾ ವಾರಿಯರ್ಸ್‌ಗಳಿಗೆ ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲು ವಾಹನ ಸೌಕರ್ಯವನ್ನೂ ಮಾಡಿಕೊಟ್ಟಿಲ್ಲ. ಇದೆಲ್ಲಾ ಒಂದೆಡೆಯಾದರೆ, ಮನೆಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ಮಾಡಬೇಕಾದ ಈ ಬಡಪಾಯಿ ಕೊರೋನಾ ವಾರಿಯರ್ಸ್‌ಗಳಿಗೆ ಆರೋಗ್ಯ ತಪಾಸಣಾ ವಿಧಾನದ ಬಗ್ಗೆ ಯಾವ ತರಬೇತಿಯೂ ಆಗಿಲ್ಲ. ಸರಕಾರದ ಲೆಕ್ಕದಲ್ಲಿ ಎರಡಕ್ಕಿಂತ ಹೆಚ್ಚು ಕೊರೋನಾ ಸೋಂಕು ಪತ್ತೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಹೈರಿಸ್ಕ್ ಏರಿಯಾವಾದರೆ; ಈ ಏರಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳಾದ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರ ಜೀವವೇ ಹೈರಿಸ್ಕ್‌ನಲ್ಲಿರುವಂತಾಗಿದೆ. ಒಂದೊಮ್ಮೆ ಇವರು ಆರೋಗ್ಯ ತಪಾಸಣೆಗೆ ತೆರಳಿದ ಮನೆಯಲ್ಲಿ ಒಬ್ಬ ಕೊರೋನಾ ಸೋಂಕಿತನಿದ್ದರೆ, ಆತನನ್ನು ಪರೀಕ್ಷಿಸಿದ ಕೊರೋನಾ ವಾರಿಯರ್ ಪಿಪಿಇ ಕಿಟ್ ಸಹಿತ ಸೂಕ್ತವಾದ ಅಗತ್ಯ ಸುರಕ್ಷತಾ ಕ್ರಮ ಪಾಲಿಸದೇ ತಾನು ಸ್ವತಹ ಕೊರೋನಾ ಸೋಂಕಿ ತಗಲಿಸಿಕೊಳ್ಳುವ ಭೀತಿಯ ನಡುವೆ, ತಾನು ನಂತರ ಆ ದಿನಗಳಲ್ಲಿ ಆರೋಗ್ಯ ತಪಾಸಣೆಗೆ ತೆರಳಿದ ಎಲ್ಲ ಮನೆಗಳ ಎಲ್ಲ ಸದಸ್ಯರಿಗೂ ಕೊರೋನಾ ಸೋಂಕು ಹರಡಬಹುದಾದ ಆತಂಕ ಸೃಷ್ಟಿಸುತ್ತಾರೆ. ಅಂತೂ ಸರಕಾರದ ಇಂತಹ ಎಡವಟ್ಟು ನಿರ್ಧಾರಗಳು ನಾಡಿನಲ್ಲಿ ಕೊರೋನಾ ಸೋಂಕಿನ ವೇಗಕ್ಕೆ ಎಕ್ಸಿಲೇಟರ್ ಕೊಟ್ಟಂತೆ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗದಿರಲು ಮನನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲು ತರಬೇತಿ ಹೊಂದಿರುವ ದಾದಿಯರನ್ನು ಸೂಕ್ತ ಸುರಕ್ಷತಾ ಸಾಧನಗಳನ್ನು ನೀಡಿದ ಬಳಿಕ ನಿಯೋಜಿಸಲಿ. ಅವರಿಗೆ ಸಹಾಯಕರಾಗಿ ಸೂಕ್ತ ಸುರಕ್ಷತಾ ಸಾಧನಗಳನ್ನು ನೀಡಿಯೇ ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರನ್ನು ಕಳುಹಿಸಲಿ. ನಮ್ಮೂರ ಶಾಸಕ ಹರೀಶ್ ಪೂಂಜಾ ಈ ಸತ್ಕಾರ್ಯದ ಮುಂಚೂಣಿಯಲ್ಲಿ ನಿಲ್ಲುವಂತಾಗಲಿ.

Latest News

Related Posts